ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಗೋರಖ್ಪುರ ಮೃಗಾಲಯಕ್ಕೆ ಭೇಟಿ ನೀಡಿ ಅಲ್ಲಿ ಚಿರತೆ ಮರಿಗೆ ಹಾಲುಣಿಸಿದ್ದಾರೆ.
ಗೋರಖ್ಪುರದ ಶಹೀದ್ ಅಶ್ಫಾಕ್ ಉಲ್ಲಾ ಖಾನ್ ಜಿಯಾಲಾಜಿಕಲ್ ಪಾರ್ಕ್ ಮತ್ತು ಪಶುವೈದ್ಯಕಿಯ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಅಲ್ಲಿನ ಸ್ಥಿತಿಗತಿಯ ತಪಾಸಣೆ ನಡೆಸಿದರು. ತಮ್ಮ ಭೇಟಿಯ ಸಂದರ್ಭದಲ್ಲಿ ಆದಿತ್ಯನಾಥ್ ಅವರು ಕಾನ್ಪುರದ ಮೃಗಾಲಯದಿಂದ ತರಲಾದ ಬಿಳಿ ಹುಲಿ ಮತ್ತು ಎರಡು ಹಿಮಾಲಯನ್ ಕಪ್ಪು ಕರಡಿಗಳನ್ನು ಮೃಗಾಲಯದಲ್ಲಿ ಬಿಡುಗಡೆ ಮಾಡಿದರು. ಮೃಗಾಲಯದ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಎರಡು ಚಿರತೆ ಮರಿಗಳಿಗೆ ಭವಾನಿ ಮತ್ತು ಚಂಡಿ ಎಂದು ಹೆಸರಿಟ್ಟಿದ್ದಾರೆ. ಬಳಿಕ ಚಿರತೆ ಮರಿಗೆ ಹಾಲನ್ನು ಕುಡಿಸಿದ್ದಾರೆ.
ಯುಪಿ ಸರ್ಕಾರದ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ನಂತರ, ಮೃಗಾಲಯದ ಅಧಿಕಾರಿಗಳು ಆವರಣದ ವೈಶಿಷ್ಟ್ಯಗಳನ್ನು ಮುಖ್ಯಮಂತ್ರಿಗೆ ವಿವರಿಸಿದರು ಮತ್ತು ಪ್ರಾಣಿಗಳನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.
ಆದಿತ್ಯನಾಥ್ ಅವರು ಮೃಗಾಲಯದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ವನ್ಯಜೀವಿಗಳ ರಕ್ಷಣೆ ಮತ್ತು ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸಿದರು. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಸರಿಯಾದ ಆರೈಕೆ ಮತ್ತು ಚಿಕಿತ್ಸೆಗಾಗಿ ಪಶುವೈದ್ಯರ ಪ್ರತ್ಯೇಕ ವೃಂದದ ಅಗತ್ಯವನ್ನು ತಿಳಿಸಿದರು.