ಬಳ್ಳಿ ತರಕಾರಿಗಳು ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಮಿಕ್ಕೆಲ್ಲಾ ತರಕಾರಿಗಳಿಗಿಂತ ಹೆಚ್ಚಿನ ಪೋಷಕಾಂಶ ಇರುತ್ತದೆ. ಚಪಾತಿ, ರೊಟ್ಟಿಗೆ ಒಳ್ಳೆಯ ಕಾಂಬಿನೇಶನ್ ಸಿಹಿ ಕುಂಬಳಕಾಯಿಯ ಗೊಜ್ಜು. ಇದನ್ನ ಮಾಡುವುದು ಹೇಗೆ ಗೊತ್ತಾ ? ಇಲ್ಲಿದೆ ವಿವರ.
ಬೇಕಾಗುವ ಸಾಮಗ್ರಿ:
ತಿರುಳು ಹಾಗೂ ಸಿಪ್ಪೆ ತೆಗೆದ ಕುಂಬಳ ಕಾಯಿ – 1/4ಕೆಜಿ
ಒಣ ಮೆಣಸಿನಕಾಯಿ – 5 ರಿಂದ 6
ತೆಂಗಿನ ತುರಿ – ಒಂದು ಸಣ್ಣ ಹೋಳು
ಕಡಲೇ ಬೇಳೆ – 1 ಟೀ ಚಮಚ
ಉದ್ದಿನ ಬೇಳೆ – 1 ಟೀ ಚಮಚ
ಬಿಳಿ ಎಳ್ಳು – 1 ಟೀ ಚಮಚ
ಹುಣಸೆಹಣ್ಣು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅರಿಶಿನ ಪುಡಿ – ಸ್ವಲ್ಪ
ಬೆಲ್ಲ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸಿಹಿ ಕುಂಬಳ ಗೊಜ್ಜು ಮಾಡುವ ವಿಧಾನ
ಸಿಹಿ ಕುಂಬಳಕಾಯಿಯ ಸಿಪ್ಪೆ ಹಾಗೂ ತಿರುಳು ತೆಗೆದು ಹೆಚ್ಚಿ. ಬಾಣಲೆಯಲ್ಲಿ ಸ್ವಲ ಎಣ್ಣೆ ಹಾಕಿ ಕಡಲೇ ಬೇಳೆ, ಉದ್ದಿನ ಬೇಳೆ, ಒಣಮೆಣಸಿನಕಾಯಿ, ಎಳ್ಳು ಇಷ್ಟನ್ನು ಕೆಂಪಗೆ ಹುರಿದು ಮಿಕ್ಸಿ ಜಾರಿಗೆ ಹಾಕಿ. ಇದರ ಜೊತೆಗೆ ಕಾಯಿ ತುರಿ, ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ಈಗ ಅದೇ ಬಾಣಲೆಗೆ ಹೆಚ್ಚಿರುವ ಕುಂಬಳಕಾಯಿಗೆ ಒಗ್ಗರಣೆ ಕೊಟ್ಟು, ಸ್ವಲ್ಪ ನೀರು ಹಾಕಿ ಬೇಯಲು ಬಿಡಿ. 5 ನಿಮಿಷಕ್ಕಿಂತ ಇದನ್ನು ಹೆಚ್ಚು ಬೇಯಿಸುವ ಹಾಗಿಲ್ಲ. ನಂತರ ರುಬ್ಬಿದ ಮಸಾಲೆ ಸೇರಿಸಿ, ಉಪ್ಪು, ಬೆಲ್ಲ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಕುದಿಸಿ ಕೊನೆಯಲ್ಲಿ ಒಗ್ಗರಣೆ ಹಾಕಿ.
ತಯಾರಾದ ಸಿಹಿ ಕುಂಬಳಗೊಜ್ಜನ್ನು ಬಿಸಿ ಬಿಸಿ ರೊಟ್ಟಿ ಅಥವಾ ಚಪಾತಿಯ ಜೊತೆ ಸರ್ವ್ ಮಾಡಿ.