ಕೋವಿಡ್ನ ಎಲ್ಲಾ ಲಸಿಕೆಗಳು ಸೋಂಕನ್ನು ತಡೆಯುವುದಿಲ್ಲ. ಅವು ಪ್ರಾಥಮಿಕ ಹಂತದಲ್ಲಿಯೇ ಸೋಂಕನ್ನು ಮಾರ್ಪಾಡು ಮಾಡುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಐಸಿಎಂಆರ್ ಡಿಜಿ ಬಲರಾಮ ಭಾರ್ಗವ, ಭಾರತದ್ದೇ ಆಗಿರಲಿ ಅಥವಾ ಇಸ್ರೆಲ್, ಅಮೆರಿಕ, ಯುರೋಪ್, ಬ್ರಿಟನ್, ಚೀನಾ ಹೀಗೆ ಯಾವುದೇ ದೇಶದ್ದಾಗಿರಲಿ ಅವು ಪ್ರಾಥಮಿಕವಾಗಿ ರೋಗವನ್ನು ಮಾರ್ಪಾಡು ಮಾಡುತ್ತವೆ. ಅವು ಸೋಂಕನ್ನು ತಡೆಯುವುದಿಲ್ಲ. ಈ ಲಸಿಕೆಗಳು ಪ್ರಾಥಮಿಕ ಹಂತದಲ್ಲಿ ರೋಗದ ತೀವ್ರತೆಯನ್ನು ತಗ್ಗಿಸಲು ಹಾಗೂ ಆಸ್ಪತ್ರೆಗೆ ದಾಖಲಾಗುವವರು ಮತ್ತು ಮರಣದ ಪ್ರಮಾಣವನ್ನು ಕಡಿಮೆ ಮಾಡುತ್ತದೆಯೇ ಹೊರತು ಸೋಂಕನ್ನು ತಡೆಯುವುದಿಲ್ಲ ಎಂದು ಹೇಳಿದರು.
ಕೊರೊನಾ ಲಸಿಕೆಗಿಂತ ಮುನ್ನ ಹಾಗೂ ಲಸಿಕೆ ಸ್ವೀಕರಿಸಿದ ಬಳಿಕ ಮಾಸ್ಕ್ಗಳನ್ನು ಧರಿಸುವುದು ಅನಿವಾರ್ಯವಾಗಿದೆ. ಜನದಟ್ಟಣೆಯ ಸ್ಥಳಗಳಿಗೆ ಯಾವುದೇ ಕಾರಣಕ್ಕೂ ತೆರಳಬಾರದು. ಈ ಹಿಂದಿನ ಅಥವಾ ಈಗಿರುವ ಕೊರೊನಾದ ಯಾವುದೇ ತಳಿಗಳಿಗೆ ಕೊರೊನಾ ಮಾರ್ಗಸೂಚಿಗಳು ಒಂದೇ ಆಗಿದೆ. ಈಗಲೂ ಕೂಡ ಹೋಂ ಐಸೋಲೇಷನ್ ಎನ್ನುವುದು ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಬಲರಾಮ ಭಾರ್ಗವ ಹೇಳಿದರು.