ದೀರ್ಘಕಾಲಿಕ ಅನಿದ್ರತೆಗೆ ವೈದ್ಯಕೀಯ ಚಿಕಿತ್ಸೆಯನ್ನು ಹೊರತುಪಡಿಸಿದರೆ ಪರ್ಯಾಯವೇನಿಲ್ಲ. ಆದರೆ ತಾತ್ಕಾಲಿಕವಾಗಿ ಎದುರಾಗುವ ಅಕ್ಯೂಟ್ ಇನ್ಸೊಮ್ನಿಯವನ್ನು ಕೆಲವು ಕ್ರಮಗಳನ್ನು ಅನುಸರಿಸಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಜೀವನ ಶೈಲಿಯಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿಕೊಂಡರೆ ಪ್ರಶಾಂತವಾಗಿ ನಿದ್ರಿಸಬಹುದು.
* ಪ್ರತಿದಿನವೂ ರಾತ್ರಿ ವೇಳೆ ನಿರ್ದಿಷ್ಟ ಸಮಯಕ್ಕೆ ಮಲಗಲು ಪ್ರಯತ್ನಿಸಿರಿ. ನಿದ್ರೆ ಬರುವುದಿದ್ದರೂ, ಬಾರದಿದ್ದರೂ ನಿರ್ದಿಷ್ಟ ಸಮಯಕ್ಕೆ ಹಾಸಿಗೆಯನ್ನು ಆಶ್ರಯಿಸಿರಿ.
* ಸಾಯಂಕಾಲದ ಸಮಯದಲ್ಲಿ ಕುಟುಂಬದ ಸದಸ್ಯರೊಂದಿಗೆ ಗಂಭೀರ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ಇಲ್ಲವೇ ಜಗಳ ಮಾಡುವಂತಹ ಸಂದರ್ಭಗಳನ್ನು ದೂರ ಮಾಡಿ.
* ರಾತ್ರಿ ವೇಳೆ ಹೊಟ್ಟೆ ಬಿರಿಯುವಂತೆ ಅತಿಯಾಗಿ ಭೋಜನ ಮಾಡುವುದು ಬೇಡ. ಊಟ ಅತಿಯಾದರೆ ನಿದ್ರೆ ಹಿಡಿಯುವುದು ಕಷ್ಟವಾಗುತ್ತದೆ.
* ಅನಿದ್ರತೆಯು ಕಾಟ ಕೊಡುತ್ತಿದ್ದರೆ, ಹಗಲು ಹೊತ್ತು ನಿದ್ರೆ ಮಾಡಬಹುದು. ಹಗಲು ನಿದ್ರೆಯೇ ರೂಢಿಯಾದರೆ ರಾತ್ರಿ ವೇಳೆ ನಿದ್ರೆ ಹಾಳಾಗುವ ಸಾಧ್ಯತೆ ಇರುತ್ತದೆ.
* ನಿದ್ರೆಗೆ ಉಪಕ್ರಮಿಸುವ ಮೊದಲು ಕನಿಷ್ಠ ಒಂದು ಗಂಟೆ ಮುನ್ನ ಟಿವಿ, ಲ್ಯಾಪ್ ಟಾಪ್, ಕಂಪ್ಯೂಟರ್ಗಳನ್ನು ನೋಡುವುದಕ್ಕೆ ಬ್ರೇಕ್ ಹಾಕಿ. ಅತ್ಯವಶ್ಯಕವೆನಿಸದಿದ್ದರೆ ಮೊಬೈಲ್ ಗಳನ್ನು ಆ ಸಮಯದಲ್ಲಿ ಉಪಯೋಗಿಸಬಾರದು.
* ನಿದ್ರೆಗೆ ಜಾರುವ ಅರ್ಧ ಗಂಟೆಯ ಮುನ್ನ ಉಗುರು ಬೆಚ್ಚಗಿನ ಹಾಲನ್ನು ಕುಡಿಯಿರಿ.
* ನಿದ್ರೆ ಹೋಗುವ ಸಮಯದಲ್ಲಿ ಮನೆಯಲ್ಲಿ ಕರ್ಕಶ ಶಬ್ದಗಳು ಇರದಂತೆ ಎಚ್ಚರ ವಹಿಸಿ. ಮನೆಯ ಅಕ್ಕಪಕ್ಕದಲ್ಲಿ ಇಂತಹ ಶಬ್ದಗಳು ಉಂಟಾಗದಂತೆ ತಿಳಿಸಿರಿ.
* ನಿದ್ರೆಗೆ ಹೋಗುವ ಮೊದಲು ಯಾವುದಾದರೂ ಒಳ್ಳೆಯ ಪುಸ್ತಕ ಓದುವುದು, ಸಂಗೀತ ಆಲಿಸುವುದು, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವಂತಹವುಗಳಿಂದ ನಿದ್ರೆ ಹಾಯಾಗಿ ಬರುತ್ತದೆ.
* ಬೆಡ್ ರೂಮಿನಲ್ಲಿ ಮಂದ ಬೆಳಕಿನ ವಿನಾ ಮತ್ಯಾವ ಬೆಳಕು ಇರಬಾರದು. ಹೆಚ್ಚಿನ ಬೆಳಕು ನಿದ್ರೆಗೆ ಭಂಗ ತರುತ್ತದೆ.