alex Certify ಅಪರೂಪದ ನಗರ ʼದೆಹಲಿʼಯನ್ನೊಮ್ಮೆ ನೋಡಿ ಬನ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ನಗರ ʼದೆಹಲಿʼಯನ್ನೊಮ್ಮೆ ನೋಡಿ ಬನ್ನಿ

ಭಾರತದಲ್ಲಿ ಅನೇಕ ಮಹಾನಗರಗಳಿವೆ. ಅವುಗಳಲ್ಲಿ ರಾಷ್ಟ್ರದ ರಾಜಧಾನಿ ದೆಹಲಿ ಅಪರೂಪದ ನಗರಗಳಲ್ಲಿ ಒಂದಾಗಿದೆ. ಹಿಂದಿನ ಕಾಲದಿಂದಲೂ ಅಸ್ತಿತ್ವವನ್ನು ಉಳಿಸಿಕೊಂಡು ಹೆಚ್ಚಿನ ಪ್ರತಿಷ್ಠೆಯಿಂದ ಮೆರೆಯುವ ನಗರಗಳಲ್ಲಿ ದೆಹಲಿ ಪ್ರಮುಖವಾಗಿದೆ.

ಹಿಂದಿನ ಕಾಲದಲ್ಲಿ ಪಾಂಡವರು ಈ ನಗರವನ್ನು ಸ್ಥಾಪಿಸಿ ಇಂದ್ರಪ್ರಸ್ಥವೆಂದು ಕರೆಯುತ್ತಿದ್ದರು ಎನ್ನಲಾಗಿದೆ. ಗುಲಾಮಿ, ಖಿಲ್ಜಿ, ತುಘಲಕ್, ಲೋದಿ ಮತ್ತು ಮೊಘಲ್ ಸಂತತಿಯ ಅರಸರು ದೆಹಲಿಯ ಪ್ರದೇಶವನ್ನು ಆಳಿದ್ದರು. ಬಹುತೇಕ ಎಲ್ಲಾ ದೊರೆಗಳು ದೆಹಲಿಯನ್ನು ವಿಸ್ತರಿಸಿದ್ದಾರೆ. ಅನೇಕ ಸಲ ಈ ನಗರವನ್ನು ಕೆಡವಿ ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ. ಹಳೆಯ ದೆಹಲಿಯಲ್ಲಿ ಹಿಂದಿನ ಗತವೈಭವ ಕಾಣಬಹುದು. ಹೊಸ ದೆಹಲಿ ಆಧುನಿಕತೆಯನ್ನು ಹೊಂದಿದೆ.

ದೆಹಲಿಯಲ್ಲಿ ನೋಡಬಹುದಾದ ಪ್ರಮುಖ ಸ್ಥಳ ಕೆಂಪುಕೋಟೆ. ಷಹಜಹಾನ್ ಇದನ್ನು ನಿರ್ಮಿಸಿದ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 1639 ರಿಂದ 1648 ರ ವರೆಗೆ ಇದನ್ನು ನಿರ್ಮಿಸಲಾಗಿದ್ದು, ಕೆಂಪು ಬಣ್ಣದ ಕಲ್ಲನ್ನು ಬಳಸಲಾಗಿದೆ. ಇಲ್ಲಿನ ದಿವಾನ್ ಎ ಖಾಸ್, ರಂಗಮಹಲ್, ಮುಮ್ತಾಜ್ ಮಹಲ್, ತಸಬೀಹ್ ಮೊದಲಾದವು ನೋಡಬಹುದಾದ ಸ್ಥಳಗಳಾಗಿವೆ. ಕೆಂಪು ಕೋಟೆಯಲ್ಲಿ ವಸ್ತು ಸಂಗ್ರಹಾಲಯವಿದೆ. ಕುಶಲ ಕಲೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಜುಮ್ಮಾ ಮಸೀದಿ ವಿಶ್ವವಿಖ್ಯಾತವಾಗಿದೆ. 3 ಪ್ರವೇಶ ದ್ವಾರಗಳು ಇದಕ್ಕಿದ್ದು, ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ವಿಶಾಲವಾದ ಮಸೀದಿ ಇದಾಗಿದ್ದು, ಸುಮಾರು 25,000 ಮಂದಿ ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸಬಹುದಾಗಿದೆ.

ಚಾಂದಿನಿ ಚೌಕ್ ದೆಹಲಿಯ ಪ್ರಮುಖ ಸ್ಥಳ. ಇಲ್ಲಿನ ಪೇಟೆ ಬೀದಿಯಲ್ಲಿ ವಸ್ತುಗಳ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ರಾಜಘಾಟ್, ಶಾಂತಿವನ್, ವಿಜಯಘಾಟ್ ಗಳಿದ್ದು, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕಗಳಿವೆ. ಸಮೀಪದಲ್ಲೇ ಇಂದಿರಾಗಾಂಧಿ ಅವರ ಸಮಾಧಿ ಇರುವ ಶಕ್ತಿ ಸ್ಥಳ, ರಾಜೀವ್ ಗಾಂಧಿ ಅವರ ಸಮಾಧಿ ಇರುವ ವೀರಭೂಮಿ ಇದೆ.

ಪ್ರಗತಿ ಮೈದಾನದ ಬಳಿ ಇರುವ ಹಳೆಕೋಟೆಯನ್ನೂ ಕೆಂಪುಕಲ್ಲಿನಿಂದ ಕಟ್ಟಲಾಗಿದ್ದು, ಇದು ಕೂಡ ಪ್ರವಾಸಿಗರನ್ನು ಆಕರ್ಷಿಸಿತ್ತದೆ. ಪ್ರಗತಿ ಮೈದಾನಕ್ಕೆ ಸಮೀಪದಲ್ಲಿ ಪ್ರಾಣಿಸಂಗ್ರಹಾಲಯವಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಕನ್ಹಾಟ್ ಪ್ಲೇಸ್ ದೆಹಲಿಯ ಹೃದಯವೆಂದು ಕರೆಯಲ್ಪಡುತ್ತದೆ. ಇಲ್ಲಿನ ಗಗನಚುಂಬಿ ಕಟ್ಟಡಗಳು, ರಸ್ತೆ, ಖರೀದಿ ತಾಣಗಳು ಆಧುನಿಕತೆಯನ್ನು ಮೈಗೂಡಿಸಿಕೊಂಡಿದೆ.

ಜಂತರ್ ಮಂತರ್ ಅನ್ನು ಮಹಾರಾಜ ಸವಾಯಿ ಮಾನಸಿಂಗ್ ನಿರ್ಮಿಸಿದನೆಂದು ಹೇಳಲಾಗಿದೆ. ತಾರಾ ವೀಕ್ಷಣೆಯಲ್ಲಿ ಆಸಕ್ತಿ ಇರುವವರು ಇಲ್ಲಿಗೆ ಹೆಚ್ಚಾಗಿ ಭೇಟಿ ಕೊಡುತ್ತಾರೆ. ಇಂಡಿಯಾಗೇಟ್ ದೆಹಲಿಯ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ರಾಷ್ಟ್ರಪತಿ ಭವನದ ಬಳಿ ಇದನ್ನು ಕಾಣಬಹುದಾಗಿದೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರದರ್ಶನಗಳು ನಡೆಯುತ್ತವೆ. ರಾಷ್ಟ್ರಪತಿ ಭವನ, ಮೊಘಲ್ ಗಾರ್ಡನ್, ತೀನ್ ಮೂರ್ತಿ ಭವನ್ ಬಿರ್ಲಾ ಮಂದಿರ, ಲೋಟಸ್ ಮಹಲ್, ಡಾಲ್ಸ್ ಮ್ಯೂಜಿಯಂ, ರೈಲು ಸಂಗ್ರಹಾಲಯ, ಲೋಟಸ್ ಟೆಂಪಲ್, ಕುತುಬ್ ಮಿನಾರ್, ಕಾಲಿಂದಿ ಕುಂಜ್ ಸೇರಿ ಹಲವು ನೋಡಬಹುದಾದ ಸ್ಥಳಗಳು ದೆಹಲಿಯಲ್ಲಿವೆ. ಬಿಡುವು ಮಾಡಿಕೊಂಡು ನೋಡಿಬನ್ನಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...