alex Certify ರುಚಿ ರುಚಿಯಾದ ʼಪಾವ್ ಬಾಜಿʼ ಮಸಾಲಾ ದೋಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿ ರುಚಿಯಾದ ʼಪಾವ್ ಬಾಜಿʼ ಮಸಾಲಾ ದೋಸೆ

ಬೆಳಗಿನ ಉಪಹಾರಕ್ಕೆ ಮಾಡುವ ತಿಂಡಿಗಳಲ್ಲಿ ದೋಸೆಯೂ ಸಹ ಒಂದು. ಇದು ಬೆಳಗಿನ ತಿಂಡಿಗೂ ಸೂಕ್ತ, ಸಂಜೆಯ ತಿಂಡಿಗೂ ಹೊಂದುತ್ತದೆ.

ಹೋಟೆಲ್‌ ಗಳಿಗೆ ಹೋದರೆ ಮಸಾಲಾ ದೋಸೆ, ಬೆಣ್ಣೆ ದೋಸೆ, ರಾಗಿ ದೋಸೆ, ಪ್ಲೇನ್ ದೋಸೆ ಹೀಗೆ ದೋಸೆಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ವಿಶೇಷವಾಗಿ ಸಂಜೆಯ ತಿಂಡಿಗೆ ಮನೆಯಲ್ಲಿಯೇ ಸುಲಭವಾಗಿ ಪಾವ್ ಬಾಜಿ ಮಸಾಲಾ ದೋಸೆ ತಯಾರಿಸಬಹುದು. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

ಬೆಣ್ಣೆ – ಸ್ವಲ್ಪ
ಜೀರಿಗೆ – 1 ಚಮಚ
ಈರುಳ್ಳಿ – 1/2 ಕಪ್
ಕ್ಯಾಪ್ಸಿಕಮ್ – 1/2 ಕಪ್
ಟೊಮೆಟೋ – 1/2 ಕಪ್
ಚಿಲ್ಲಿ ಪೇಸ್ಟ್ – 2 ಚಮಚ
ಬೇಯಿಸಿದ ಆಲೂಗಡ್ಡೆ – 1 ಕಪ್
ಹಸಿರು ಬಟಾಣಿ – 1/2 ಕಪ್
ಅಚ್ಚಖಾರದ ಪುಡಿ – 1 ಚಮಚ
ಪಾವ್ ಬಾಜಿ ಮಸಾಲಾ – 1 ಚಮಚ
ಉಪ್ಪು – ರುಚಿಗೆ
ಕೊತ್ತಂಬರಿ ಸೊಪ್ಪು – ಸ್ವಲ್ಪ
ದೋಸೆ ಹಿಟ್ಟು – ಸ್ವಲ್ಪ
ಚೀಸ್ – ಸ್ವಲ್ಪ

ಮಾಡುವ ವಿಧಾನ

ಒಂದು ಪ್ಯಾನ್ ಗೆ 3-4 ಚಮಚ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ. ಬೆಣ್ಣೆ ಕರಗಿದಂತೆ ಅದಕ್ಕೆ ಜೀರಿಗೆಯನ್ನು ಹಾಕಿ ಹುರಿಯಿರಿ.

1 ನಿಮಿಷದ ನಂತರ ಹೆಚ್ಚಿದ ಈರುಳ್ಳಿ ಮತ್ತು ಕ್ಯಾಪ್ಸಿಕಮ್ ಹಾಕಿ ಹುರಿಯಿರಿ. 2 ನಿಮಿಷ ಬಿಟ್ಟು ಅದಕ್ಕೆ ಹೆಚ್ಚಿದ ಟೊಮೆಟೋ, ರೆಡ್ ಚಿಲ್ಲಿ ಪೇಸ್ಟ್ ಮತ್ತು ಬೇಯಿಸಿ ಸ್ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಈಗ ಇದಕ್ಕೆ ಬೇಯಿಸಿದ ಹಸಿರು ಬಟಾಣಿ, ಅಚ್ಚಖಾರದ ಪುಡಿ, ಪಾವ್ ಬಾಜಿ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಈ ಮಿಶ್ರಣಕ್ಕೆ 1/2 ಕಪ್‌ ನೀರನ್ನು ಸೇರಿಸಿ ಚೆನ್ನಾಗಿ ಸ್ಮ್ಯಾಶ್ ಮಾಡಿ 5 ನಿಮಿಷ ಕುದಿಸಿ. ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

ಈಗ ತವಾವನ್ನು ಸ್ಟೌ ಮೇಲಿಟ್ಟು ಬಿಸಿಯಾದ ನಂತರ ದೋಸೆ ಹಿಟ್ಟನ್ನು ಹಾಕಿ ತೆಳುವಾಗಿ ಹರಡಿ. 1 ಚಮಚ ಬೆಣ್ಣೆಯನ್ನು ದೋಸೆಗೆ ಸವರಿ ಅದರ ಮೇಲೆ ಈಗಾಗಲೇ ಸಿದ್ಧವಾಗಿರುವ ಮಸಾಲೆಯನ್ನು ಸ್ವಲ್ಪ ಹಾಕಿ ದೋಸೆಯ ಮೇಲೆ ಹರಡಿ.

ನಂತರ ಸ್ವಲ್ಪ ಚೀಸ್ ತುರಿಯನ್ನೂ ಸಹ ಹಾಕಿದರೆ ಪಾವ್ ಬಾಜಿ ದೋಸಾ ಸಿದ್ಧವಾಗುತ್ತದೆ. ಇದು ಕೊತ್ತಂಬರಿ ಸೊಪ್ಪಿನ ಚಟ್ನಿ ಅಥವಾ ಕೆಂಪು ಕೊಬ್ಬರಿ ಚಟ್ನಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...