ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆ, ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಥಟ್ಟಂತ ಮಾಡಿ ಈ ಕೇಸರಿ ಪೇಡಾ. ಸುಲಭದಲ್ಲಿ ಮಾಡಿಬಿಡಬಹುದು ಜತೆಗೆ ರುಚಿಕರವಾಗಿಯೂ ಇರುತ್ತದೆ.
ಬೇಕಾಗುವ ಸಾಮಗ್ರಿಗಳು:
ಕಂಡೆನ್ಸಡ್ ಮಿಲ್ಕ್ – 1 ಕಪ್, ಮಿಲ್ಕ್ ಪೌಡರ್ – 1 ಕಪ್, ತುಪ್ಪ – 2 ಟೇಬಲ್ ಸ್ಪೂನ್, ಹಾಲು – 2 ಟೇಬಲ್ ಸ್ಪೂನ್, ಕೇಸರಿ ದಳ – 5ಎಸಳು ಏಲಕ್ಕಿ ಪುಡಿ – 1 ಟೀ ಸ್ಪೂನ್.
ಮಾಡುವ ವಿಧಾನ:
ಹಾಲನ್ನು ಸ್ವಲ್ಪ ಉಗುರು ಬೆಚ್ಚಗಾಗಿಸಿಕೊಂಡು ಅದರಲ್ಲಿ ಈ ಕೇಸರಿ ದಳವನ್ನು ನೆನೆಸಿ. ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ಕಂಡೆನ್ಸಡ್ ಮಿಲ್ಕ್ ಹಾಕಿ ಸಣ್ಣ ಉರಿಯಲ್ಲಿ ಇದನ್ನು ಕುದಿಸಿ.
ನಂತರ ಇದಕ್ಕೆ ಹಾಲಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಯಾವುದೇ ಗಂಟಿಲ್ಲದೇ ಚೆನ್ನಾಗಿ ತಿರುಗಿಸಿ. ಈ ಮಿಶ್ರಣ ದಪ್ಪಗಾಗುತ್ತ ಬರುತ್ತಿದ್ದಂತೆ ಇದಕ್ಕೆ ಕೇಸರಿ ನೆನೆಸಿಟ್ಟ ಹಾಲು, ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣ ತಳ ಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ನಂತರ ಕೈಗೆ ತುಪ್ಪ ಸವರಿಕೊಂಡು ಉಂಡೆ ರೀತಿ ಕಟ್ಟಿ ನಿಧಾನಕ್ಕೆ ಒತ್ತಿದರೆ ರುಚಿಕರವಾದ ಪೇಡಾ ಸವಿಯಲು ಸಿದ್ಧ.