alex Certify ʼಯೋಗʼದ ಕುರಿತು ಇರುವ ತಪ್ಪು ತಿಳುವಳಿಕೆಗಳ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಯೋಗʼದ ಕುರಿತು ಇರುವ ತಪ್ಪು ತಿಳುವಳಿಕೆಗಳ ಕುರಿತು ಇಲ್ಲಿದೆ ಮಾಹಿತಿ

ಕೆಲವೇ ವರ್ಷಗಳಿಗೆ ಮುಂಚೆ ಯೋಗವೆಂದರೆ ಮೂಗು ಮುರಿಯುತ್ತಿದ್ದ, ಅಸಡ್ಡೆ ಮಾಡುತ್ತಿದ್ದ, ತಾತ್ಸಾರ ಮಾಡುತ್ತಿದ್ದ, ಎಲ್ಲ ವರ್ಗಗಳ ಜನರೂ ಇಂದು ಯೋಗ ಮಾರ್ಗದತ್ತ ಚಲಿಸುತ್ತಿದ್ದಾರೆ.

ವಿಶ್ವದಾದ್ಯಂತ ಯೋಗಕ್ಕೆ ಸಿಗುತ್ತಿರುವ ಮನ್ನಣೆ, ಜನಪ್ರಿಯತೆ ಮತ್ತು ಯೋಗದಿಂದ ತಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡ ಲಕ್ಷಾಂತರ ಜನರಲ್ಲಿನ ಬದಲಾವಣೆ, ಪರಿವರ್ತನೆಗಳನ್ನು ಕಂಡುಕೊಂಡೋ ಅಥವಾ ಅವರಿವರಿಂದ ಪ್ರಭಾವಿತಗೊಂಡೋ ಯೋಗಕ್ಕೆ ಶರಣಾಗುತ್ತಿದ್ದಾರೆ. ಯೋಗ ಜೀವಿಗಳಾಗಿ ನೆಮ್ಮದಿ, ಆರೋಗ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

ಪ್ರತಿಯೊಂದು ಊರುಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ, ಯೋಗ ತರಬೇತಿ ನೀಡುವ ಶಾಲೆಗಳು, ಕೇಂದ್ರಗಳು ತೆರೆದುಕೊಂಡಿವೆ, ಪತ್ರಿಕೆಗಳು, ಪುಸ್ತಕಗಳು, ರೇಡಿಯೋ, ಟಿ.ವಿ. ಮಾಧ್ಯಮಗಳಲ್ಲಿ ಯೋಗಗುರುಗಳು ನಡೆಸಿಕೊಡುವ ಕಾರ್ಯಕ್ರಮಗಳನ್ನು ನೋಡಿ, ಕೇಳಿ ತಿಳಿದುಕೊಂಡು ಯೋಗವನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ.

ಅಪಾರ್ಟಮೆಂಟ್ ಗಳಲ್ಲಿ, ಜಿಮ್ ಕೇಂದ್ರಗಳಲ್ಲಿ, ಕೆಲವು ಖಾಸಗಿ ಸಂಘ-ಸಂಸ್ಥೆ, ಶಾಲಾ-ಕಾಲೇಜುಗಳಲ್ಲಿ ಯೋಗ ತರಬೇತಿ ನೀಡುವ ಶಿಬಿರಗಳಿಂದಾಗಿ ಇಂದು ಹೆಚ್ಚಿನ ರೀತಿಯಲ್ಲಿ ಯೋಗದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡತೊಡಗಿದೆ. ವಿಶ್ವಯೋಗ ದಿನಾಚರಣೆ (ಜೂನ್21) ಯನ್ನು ವಿಶ್ವಸಂಸ್ಥೆಯು ಘೋಷಣೆ ಮಾಡುವಷ್ಟರ ಮಟ್ಟಿಗೆ ಯೋಗ ಬೆಳೆದಿದೆಯೆಂದರೆ ಭಾರತೀಯರಾದ ನಾವೆಲ್ಲ ಹೆಮ್ಮೆ ಪಡಲೇಬೇಕು.

ಆದರೂ ಸಹ ಇಂದಿಗೂ ಯೋಗದ ಬಗ್ಗೆ ಕೆಲವು ತಪ್ಪು ತಿಳುವಳಿಕೆಗಳು, ಕಲ್ಪನೆಗಳು ಜನರನ್ನು ಆವರಿಸಿವೆ. ಪ್ರವೃತ್ತಿಯಾಗಿ ಯೋಗ ಶಿಕ್ಷಕನಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು 10-15 ವರ್ಷಗಳ ಈ ಅವಧಿಯಲ್ಲಿ ಸಹಸ್ರಾರು ಜನರ ಚಿತ್ರ-ವಿಚಿತ್ರ ನೂರಾರು ಪ್ರಶ್ನೆಗಳನ್ನು ಎದುರಿಸಿದ್ದೇನೆ. ಅಂಥವರ ತಪ್ಪು ಕಲ್ಪನೆಗಳು ನನ್ನ ಕೈಲಾದ ಮಟ್ಟಿಗೆ ನಿವಾರಿಸಿದ್ದೇನೆ. ಆದರೂ……ಇಂದಿಗೂ, ಈಗಲೂ ಕೆಲವರಲ್ಲಿ ಮಾತ್ರವೇ ಇರಬಹುದಾದ ಆ ತಪ್ಪು ತಿಳುವಳಿಕೆಗಳ ಹಂಚಿಕೊಳ್ಳುತ್ತಿದ್ದೇನೆ.

ಈ ಪಟ್ಟಿಗೆ ನಿಮ್ಮ ಕಲ್ಪನೆ – ಕಾಣಿಕೆಗಳೇನಾದರೂ ಉಂಟೇ..? ಅಂತೆ-ಕಂತೆಗಳ ಪಟ್ಟಿ ಮಾಡಿ ನಿಮ್ಮೊಂದಿಗೆ ಯೋಗವೆಂದರೆ ಯೋಗಾಸನ ಅಥವಾ ಪ್ರಾಣಾಯಾಮ ಮಾತ್ರವಂತೆ. ಯೋಗವೆಂದರೆ ಬೊಜ್ಜು ಕರಗಿಸಲು, ತೂಕ ಕಡಿಮೆ ಮಾಡಿಕೊಳ್ಳಲು ಮಾತ್ರವಂತೆ. ಯೋಗ ಮಾಡಿದರೆ, ಸೊರಗಿ, ಕರಗಿ ಹೋಗಿಬಿಡುತ್ತಾರಂತೆ. ಯೋಗ ಮಾಡ್ತಾ ಇದ್ದರೆ ಪುರುಷತ್ವಕ್ಕೆ ಧಕ್ಕೆ, ನಪುಂಸಕತ್ವಕ್ಕೆ ಕಾರಣವಾಗುತ್ತದಂತೆ, ಯೋಗವನ್ನು ವಯಸ್ಸಾದವರು, ನಿವೃತ್ತಿ ಹೊಂದಿದವರು ಮಾತ್ರವೇ ಮಾಡಬೇಕಾದ್ದುದಂತೆ. ಯೋಗವನ್ನು ವಿದ್ಯಾರ್ಥಿಗಳು ಮಾಡಬಾರದಂತೆ, ಮನಸ್ಸು ಬದಲಾಗಿ ಬ್ರಹ್ಮಚಾರಿಗಳಾಗಿ ಬಿಡುತ್ತಾರಂತೆ. ಯೋಗವನ್ನು ಕೇವಲ ಬ್ರಹ್ಮಚಾರಿಗಳು ಮಾತ್ರವೇ ಮಾಡಬೇಕಂತೆ. ಯೋಗವೆಂದರೆ ಅದೊಂದು ದೈಹಿಕ ವ್ಯಾಯಮ, ಆಟಗಳಿಗೆ ಸಮವಿದ್ದಂತೆ. ಯೋಗವನ್ನು ಸ್ತ್ರೀಯರು ಮಾಡಲೇಬಾರದು, ಪುರುಷರಿಗೆ ಮಾತ್ರ ಮೀಸಲಂತೆ. ಯೋಗವನ್ನು ಗರ್ಭಿಣಿ ಸ್ತ್ರೀಯರು ಮಾಡಬಾರದಂತೆ. ಯೋಗವನ್ನು ಗುಡ್ಡ, ಬೆಟ್ಟ, ಅರಣ್ಯ ಪ್ರದೇಶಗಳಲ್ಲಿ ಏಕಾಂಗಿಯಾಗಿ ಮಾಡಬೇಕಂತೆ. ಮಾನಸಿಕ, ದೈಹಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಯೋಗ ಮಾಡಬಾರದಂತೆ. ಯೌವ್ವನದಲ್ಲಿ ಯೋಗ ಮಾಡಿದರೆ ಸನ್ಯಾಸಿಗಳಾಗುತ್ತಾರಂತೆ, ಯೋಗವನ್ನು ಹಿಂದೂಗಳು ಮಾತ್ರವೇ ಮಾಡಬೇಕಂತೆ. ಯೋಗವನ್ನು ಪುರೊಸೊತ್ತು, ಸಮಯ ಸಿಕ್ಕಾಗ ಮಾತ್ರ ಮಾಡಬೇಕಂತೆ.

ಅಬ್ಬಾ…!! ಅಬ್ಬಬ್ಬಾ……!!! ಒಂದೇ-ಎರಡೇ, ಈ ಅಂತೆ- ಕಂತೆಗಳ ಪಟ್ಟಿಗೆ ಕೊನೆ ಮೊದಲಿಲ್ಲ. ತಲೆಗೊಂದರಂತೆ ಅಂತೆ-ಕಂತೆಗಳ ಪ್ರಶ್ನೆಗಳು, ಕಂತುಗಳಾಗಿ ಪಟ್ಟಿ ಮಾಡುತ್ತಲೇ ಇರಬಹುದಾದಷ್ಟು. ಇಂತಹ ಪ್ರಶ್ನೆಗಳನ್ನು ಸಾಮಾನ್ಯವಾಗಿ ಎಲ್ಲ ಯೋಗ ಗುರುಗಳು ಕೇಳಿದಾಗ ಸಾವಧಾನವಾಗಿ, ಸಮಾಧಾನದಿಂದ ಉತ್ತರಿಸಲೇಬೇಕಾಗುತ್ತದೆ. ಸೂಕ್ತ ಜ್ಞಾನ ತಿಳುವಳಿಕೆಯನ್ನು ನೀಡಲೇಬೇಕಾಗುತ್ತದೆ.

ಯೋಗವನ್ನು ಯಾರ್ಯಾರೆಲ್ಲ ಮಾಡಬಹುದೆಂಬುದಕ್ಕೆ ಹಠಯೋಗ ಪ್ರದೀಪಿಕಾ(1-64) ದಲ್ಲಿನ ಶ್ಲೋಕವು ಹೀಗಿದೆ. ಯುವಾ ವೃದ್ದೋತಿವೃದ್ದೋವಾ ವ್ಯಾಧಿತೋ ದುರ್ಬಲೋಪಿವಾ| ಅಭ್ಯಾಸಾತ್ ಸಿದ್ದಿಮಾಪ್ನೋತಿ ಸರ್ವಯೋಗೇಷ್ಟ ತಂದ್ರಿತಾಃ||

ಈ ಶ್ಲೋಕದ ಅರ್ಥವೇನೆಂದರೆ ಯುವಕನಿರಲಿ, ವೃದ್ದನಿರಲಿ, ಅತೀ ವೃದ್ದನಿರಲಿ, ನಿತ್ಯ ಯೋಗಾಭ್ಯಾಸದಿಂದ ಸಿದ್ದಿಯನ್ನು ಪಡೆಯುತ್ತಾರೆ. ಯೋಗ ಚಿಂತಾಮಣಿಯ ಪ್ರಕಾರ ಸ್ತ್ರೀಯರು ಮಾಸಿಕ ಧರ್ಮವನ್ನು ಅಂದರೆ ರಜಸ್ವಲೆಯರಾದಾಗ ಮತ್ತು ನವಜಾತ ಶಿಶುವಿಗೆ ಒಂದೆರೆಡು ತಿಂಗಳುಗಳಾಗುವವರೆಗೆ ಯೋಗಾಸನಗಳನ್ನು ಮಾಡಬಾರದು. ಇನ್ನುಳಿದಂತೆ ಸಾಮಾನ್ಯವಾಗಿ ಮಹಿಳೆಯರೂ, 8 ವರ್ಷ ಮೇಲ್ಪಟ್ಟ ಮಕ್ಕಳೂ ಯೋಗವನ್ನು ಮಾಡಬಹುದು.

ಯೋಗವೆನ್ನುವುದು ಒಂದು ಸಂಪೂರ್ಣ ಆರೋಗ್ಯ ಜೀವನ ಪದ್ದತಿ. ಯೋಗವೇ ಒಂದು ಧರ್ಮ ಪದ್ದತಿ. ಇಲ್ಲಿ ಜಾತಿ, ಲಿಂಗ, ವರ್ಣ, ದೇಶ, ಭಾಷೆ, ಮೇಲು-ಕೀಳುಗಳ ತಾರತಮ್ಯವಿಲ್ಲ.

ಯೋಗದ ದೃಷ್ಟಿಯಲ್ಲಿ ಎಲ್ಲರೂ ಒಂದೇ. ತುಂಬಾ ಚಿಕ್ಕ ಮಕ್ಕಳಿಗೆ ಒತ್ತಾಯದಿಂದ ಯೋಗಾಭ್ಯಾಸವನ್ನು ಮಾಡಿಸಕೂಡದು. ಕಾರಣ ಯೋಗಾಭ್ಯಾಸದ ಸಮಯದಲ್ಲಿ ಏನಾದರೂ ವ್ಯತ್ಯಾಸವಾದರೆ ಮೂಳೆಗಳ ಬೆಳವಣಿಗೆಯಲ್ಲಿ ವ್ಯತ್ಯಾಸಗಳು ಉಂಟಾಗಬಹುದು.

ಅಷ್ಟನ್ನು ಹೊರತುಪಡಿಸಿದರೆ ಉಸಿರಿರುವ ತನಕ ಎಲ್ಲರೂ ಆಹಾರ ಸೇವಿಸುವಂತೆ ಯೋಗಾಭ್ಯಾಸವನ್ನು ದಿನಚರಿಯನ್ನಾಗಿ ಆಳವಡಿಸಿಕೊಂಡಲ್ಲಿ ಅದ್ಬುತ, ಅಚ್ಚರಿ ನೀಡುವ ಫಲಿತಾಂಶಗಳನ್ನು ನೀವೇ ಕಂಡುಕೊಳ್ಳಬಹುದು. ನಿಮ್ಮ ದೇಹ-ಮನಸ್ಸುಗಳು ಸುಖ-ಶಾಂತಿಯ ನೆಲೆವೀಡಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

  • ಯೋಗಾಚಾರ್ಯ ಅನಿಲ್ ಕುಮಾರ್ ಹೆಚ್ ಶೆಟ್ಟರ್, ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಪುರಸ್ಕೃತರು

ಕಣಾದ ಯೋಗ & ರೀಸರ್ಚ್ ಫೌಂಡೇಶನ್ (ರಿ), ನಂ.9, ಸ್ಕಿನ್ ಟಚ್ ಯೋಗ ಶಾಪ್

3 ನೇ ಕ್ರಾಸ್ ದುರ್ಗಿಗುಡಿ, ಶಿವಮೊಗ್ಗ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...