ಕೋಲಾರ: ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ದಾಖಲೆಯ ಬೆಲೆಗೆ ಮಾರಾಟವಾಗಿದೆ. 15 ಕೆಜಿ ಟೊಮೆಟೊ ಬಾಕ್ಸ್ 2200 ರೂ.ಗೆ ಹರಾಜಾಗಿದೆ.
ಬೆಳೆಗಾರರಿಗೆ ಅದೃಷ್ಟ ಖುಲಾಯಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದ ವೆಂಕಟರಮಣ ಅವರು ತಂದಿದ್ದ 15 ಕೆಜಿ ಟೊಮೆಟೊ ಬಾಕ್ಸ್ ಕೋಲಾರ ಎಪಿಎಂಸಿಯಲ್ಲಿ 2200 ರೂ.ಗೆ ಹರಾಜಾಗಿದ್ದು ದಾಖಲೆ ಬರೆದಿದೆ. ವೆಂಕಟರಮಣ ಅವರು ತಂದಿದ್ದ 36 ಬಾಕ್ಸ್ ಗಳು ತಲಾ 2200 ರೂ.ಗೆ ಮಾರಾಟವಾಗಿವೆ.
ಕಳೆದ 5 ವರ್ಷಗಳಲ್ಲಿ ಇದು ದಾಖಲೆಯ ಬೆಲೆಯಾಗಿದೆ. ಕೋಲಾರ ಎಪಿಎಂಸಿ ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯಾಗಿದೆ. ಒಂದು ಕೆಜಿ ಟೊಮೆಟೊ ದರ ಸರಾಸರಿ 150 ರೂ. ಇದ್ದು, ಒಂದು ಟೊಮೆಟೊ ಬೆಲೆ 15 ರೂಪಾಯಿವರೆಗೂ ಇದೆ. ಅತಿವೃಷ್ಟಿ, ಹವಾಮಾನ ವೈಪರೀತ್ಯ, ರೋಗ ಬಾಧೆ ಮೊದಲಾದ ಕಾರಣದಿಂದ ಟೊಮೆಟೊ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದ್ದು, ದರ ಏರುಗತಿಯಲ್ಲಿ ಸಾಗಿದೆ. ಬೆಳೆಗಾರರಿಗೆ ಬಂಪರ್ ಬೆಲೆ ಸಿಗುತ್ತಿದ್ದು, ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.