alex Certify ಕೈಗಾರಿಕೆ ಬೆಳವಣಿಗೆ, ಉದ್ಯೋಗ ಸೃಷ್ಠಿಗೆ ಮಹತ್ವದ ಕ್ರಮ: ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ವಿಮಾನ ನಿಲ್ದಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಗಾರಿಕೆ ಬೆಳವಣಿಗೆ, ಉದ್ಯೋಗ ಸೃಷ್ಠಿಗೆ ಮಹತ್ವದ ಕ್ರಮ: ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ವಿಮಾನ ನಿಲ್ದಾಣ

ಬೆಂಗಳೂರು: ಸುಲಲಿತ ವ್ಯಾಪಾರೋದ್ಯಮಕ್ಕೆ ನೆರವಾಗುವಂತೆ ರಾಜ್ಯದ ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ವಿಮಾನ ನಿಲ್ದಾಣಗಳನ್ನು ಪ್ರಾರಂಭಿಸುವ ಚಿಂತನೆ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮುರುಗೇಶ್ ನಿರಾಣಿ ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ)ಯು ಕೆ.ಜಿ. ರಸ್ತೆಯಲ್ಲಿರುವ ಸರ್ ಎಂವಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಾನಾ ಪ್ರತಿಷ್ಠಿತ ಉದ್ಯಮದಾರರಿಗೆ `ರಫ್ತು ಶ್ರೇಷ್ಠತಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಇದಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲೇ ನಡೆಸಲು ಮುಂದಾಗುತ್ತೇವೆ. ವಿಮಾನ ನಿಲ್ದಾಣದಂತೆ ಅಗತ್ಯವಿರುವ ಕಡೆ ಹೆಲಿಪ್ಯಾಡ್‍ಗಳನ್ನು ಕೂಡ ನಿರ್ಮಿಸಲಾಗುವುದು. ಇದರಿಂದ ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ಉದ್ದಿಮೆದಾರರು ಬಂಡವಾಳ ಹೂಡಲು ಆಗಮಿಸುತ್ತಾರೆ. ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಸರ್ಕಾರ ಉದ್ದಿಮೆದಾರರಿಗೆ ಎಲ್ಲಾ ರೀತಿಯ ನೆರವು ನೀಡಲಿದೆ. ಹೊಸ ಉದ್ಯಮ ಆರಂಭಿಸಲು ಬರುವವರಿಗೆ ರತ್ನಗಂಬಳಿ ಹಾಕಿ ಬರಮಾಡಿಕೊಳ್ಳುತ್ತೇವೆ ಎಂದ ಸಚಿವರು, ಹಾಸನ ಜಿಲ್ಲೆಯಲ್ಲಿರುವ ಡ್ರೈ ಪೋರ್ಟ್  ಅನ್ನು ಅಭಿವೃದ್ಧಿ ಪಡಿಸುವ ಮೂಲಕ ಉದ್ಯಮ ನಡೆಸಲು ಅನುಕೂಲ ಕಲ್ಪಿಸಲಾಗುವುದು. ಇದಕ್ಕೆ ಅಗತ್ಯವಿರುವ ಆರ್ಥಿಕ ನೆರವು ನೀಡಲು ಸರಕಾರ ಸಿದ್ಧವಿದೆ ಎಂದು ನುಡಿದರು.

ಇದೇ ರೀತಿ ಕಾರವಾರದಲ್ಲಿರುವ ಬಂದರನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕೂ ಸಹ ಅಗತ್ಯ ವಿರುವ ಆರ್ಥಿಕ ನೆರವು ಕೊಟ್ಟು ವಿಶ್ವದರ್ಜೆಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಬಂದರುಗಳಲ್ಲಿ ಹೆಚ್ಚಿನ ಸೌಲಭ್ಯಗಳಿದ್ದರೆ ಆಮದು ಮತ್ತು ರಫ್ತಿಗೆ ಅನುಕೂಲವಾಗಲಿದೆ. ಇದರಿಂದ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದರು.

ತಮ್ಮ ಅಧಿಕಾರಾವಧಿಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ನೀಲನಕ್ಷೆಯನ್ನು ಸಿದ್ಧಪಡಸಲಾಗುವುದು. ರಾಜ್ಯದಲ್ಲಿರುವ ರೋಗಗ್ರಸ್ತ ಕೈಗಾರಿಕೆಗಳನ್ನು ಮುಚ್ಚದೆ, ಲಾಭದತ್ತ ಕೊಂಡೊಯ್ಯಲು ಯೋಜನೆ ರೂಪಿಸಿದ್ದೇವೆ. ರಾಜ್ಯವನ್ನು ದೇಶದಲ್ಲೇ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದರು.

ಉದ್ಯಮಿಗಳು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಮೊದಲ ಬಾರಿಗೆ ಕೈಗಾರಿಕಾ ಅದಾಲತ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಇದು ಬೆಗಳೂರಿನಿಂದ ಆರಂಭವಾಗಲಿದ್ದು, ಮೈಸೂರು, ಕಲಬುರ್ಗಿ, ಮಂಗಳೂರು ಸೇರಿದಂತೆ 5 ಸ್ಥಳಗಳಲ್ಲಿ ನಡೆಯಲಿದೆ.

ಉದ್ಯಮಿಗಳಿಗೆ ತಕ್ಷಣ ಉದ್ಯಮ ಆರಂಭಿಸಲು ಅನುಕೂಲವಾಗುವಂತೆ ಮತ್ತು ಲ್ಯಾಂಡ್ ಬ್ಯಾಂಕ್ ಕಲ್ಪನೆಯನ್ನು ಪುನರಾರಂಭಿಸುತ್ತೇವೆ. ಕೈಗಾರಿಕೆಗಳು ಕೆಐಎಡಿಬಿಯಿಂದ ಪಡೆದಿರುವ ಜಮೀನನ್ನು ಕೈಗಾರಿಕೆಗಳಿಗೆ ಬಳಸಬೇಕು. ಒಂದು ವೇಳೆ ಅನ್ಯ ಉದ್ದೇಶಗಳಿಗೆ ಬಳಸಿದರೆ ಅಂತಹ ಭೂಮಿಯನ್ನು ಹಿಂಪಡೆಯಲಾಗುವುದು ಎಂದು ಇದೇ ವೇಳೆ ಸಚಿವರು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಅತ್ಯುತ್ತಮ ಉದ್ದಿಮೆದಾರರಿಗೆ `ರಫ್ತು ಶ್ರೇಷ್ಠತಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಫ್‍ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ. ಸುಂದರ್, ಪದಾಧಿಕಾರಿಗಳಾದ ಡಾ. ಐ.ಎಸ್. ಪ್ರಸಾದ್, ಬಿ.ವಿ. ಗೋಪಾಲ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...