alex Certify ರೈತರಿಗೆ ಬಿಗ್ ಶಾಕ್: ಹುಸಿಯಾಯ್ತು ಸಾಲ ಮನ್ನಾ ನಿರೀಕ್ಷೆ, ಇಲ್ಲವಾಯ್ತು ಬೆಳೆ ನಷ್ಟ ಪರಿಹಾರ – ಕೈಯಲ್ಲಿ ಕಾಸಿಲ್ಲದಿರುವಾಗ ಸಾಲ ಮರುಪಾವತಿ ಹೇಗೆ ಸಾಧ್ಯ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಬಿಗ್ ಶಾಕ್: ಹುಸಿಯಾಯ್ತು ಸಾಲ ಮನ್ನಾ ನಿರೀಕ್ಷೆ, ಇಲ್ಲವಾಯ್ತು ಬೆಳೆ ನಷ್ಟ ಪರಿಹಾರ – ಕೈಯಲ್ಲಿ ಕಾಸಿಲ್ಲದಿರುವಾಗ ಸಾಲ ಮರುಪಾವತಿ ಹೇಗೆ ಸಾಧ್ಯ..?

ಕೇಂದ್ರ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಮೂಗಿಗೆ ತುಪ್ಪ ಹಚ್ಚುವ ಮತ್ತು ಜನರ ದಿಕ್ಕು ತಪ್ಪಿಸುವಂತಿದೆ ಎನ್ನುವ ಆರೋಪ ಕೇಳಿಬಂದಿದೆ.

ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇಂದ್ರ ಸರ್ಕಾರ ನಿರಾಸೆ ಮೂಡಿಸಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಬೇಕಿತ್ತು ಎನ್ನುವ ಅಭಿಪ್ರಾಯ ಕೇಳಿಬಂದಿದೆ. ದೇಶದ ಬೆನ್ನೆಲುಬಾದ ಅನ್ನದಾತ ರೈತರಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಪ್ಯಾಕೇಜಿನಲ್ಲಿ ಬಹು ದೊಡ್ಡ ಕೊಡುಗೆ ನೀಡಿರುವಂತೆ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ದೇಶದ ಕೃಷಿ ವಲಯದ ಗಾತ್ರವನ್ನು ಗಮನಿಸಿದಾಗ ನೀಡಿರುವ ಕೊಡುಗೆ ಏನೂ ಅಲ್ಲವೆಂದೇ ಹೇಳಲಾಗಿದೆ.

ಮೊದಲ ಪ್ಯಾಕೇಜ್ನಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗೆ 2000 ರೂ. ಜಮಾ ಮಾಡಲಾಗಿದೆ. ರೈತರಿಗಾಗಿ 30 ಸಾವಿರ ಕೋಟಿ ರೂಪಾಯಿ ಸಾಲ ನೀಡಲಾಗುವುದು. ಲಾಕ್ಡೌನ್ ಜಾರಿಗೆ ಬಂದ ನಂತರವೂ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಅದೇ ರೀತಿ 3 ಕೋಟಿ ರೈತರ 4.22 ಲಕ್ಷ ಕೋಟಿ ಮೊತ್ತದ ಸಾಲಗಳಿಗೆ ಮೂರು ತಿಂಗಳ ಕಂತು ಮುಂದೂಡಿಕೆ ಅವಕಾಶ ನೀಡಲಾಗಿದೆ. ಮಾರ್ಚ್ 1 ರಿಂದ ಏಪ್ರಿಲ್ 30ರ ಅವಧಿಯಲ್ಲಿ 86000 ಕೋಟಿ ರೂಪಾಯಿ ಮೊತ್ತದ 63 ಲಕ್ಷ ಕೃಷಿ ಸಾಲಗಳನ್ನು ವಿತರಣೆ ಮಾಡಲಾಗಿದೆ ಎಂದೆಲ್ಲಾ ಹೇಳಲಾಗಿದೆ.

ಕೇಂದ್ರ ಸರ್ಕಾರ ನೀಡಿರುವ ಪ್ಯಾಕೇಜ್ನಲ್ಲಿ ಕೃಷಿ ಸಾಲಗಳ ಮೇಲಿನ ಬಡ್ಡಿಗೆ ನೀಡಲಾಗುತ್ತಿರುವ ವಿನಾಯಿತಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ಇನ್ನು ಸಾಲ ಮರು ಪಾವತಿಸುವವರಿಗೆ ನೀಡುತ್ತಿರುವ ಪ್ರೋತ್ಸಾಹ ಧನ ಯೋಜನೆ ಮೇ 31ರವರೆಗೆ ವಿಸ್ತರಣೆಯಾಗಿದೆ ಎಂದು ಹೇಳಲಾಗಿದೆ. ಆದರೆ, ಬೆಳೆ ನಷ್ಟದಿಂದ ಖಾಲಿ ಕೈಯಲ್ಲಿ ಕುಳಿತಿರುವ ರೈತರು ಸಾಲ ಮರು ಪಾವತಿ ಮಾಡುವುದಾದರೂ ಹೇಗೆ? ಎನ್ನುವ ಪ್ರಶ್ನೆ ಎದುರಾಗಿದೆ.

ಲಾಕ್ಡೌನ್ ಸಂದರ್ಭದಲ್ಲಿ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಅದಕ್ಕಿಂತ ಮೊದಲು ಭಾರಿ ಮಳೆ ಮತ್ತು ನೆರೆ ಹಾನಿಯಿಂದ ರೈತರು ಕೈ ಸುಟ್ಟುಕೊಂಡಿದ್ದಾರೆ. ಮಳೆ ಮತ್ತು ನೆರೆ ಹಾನಿ ಹಾಗೂ ಲಾಕ್ಡೌನ್ ಕಾರಣದಿಂದ ಬೆಳೆ ನಷ್ಟ ಮಾಡಿಕೊಂಡ ರೈತರಿಗೆ ಕನಿಷ್ಠ ನಷ್ಟ ಪರಿಹಾರವನ್ನಾದರೂ ಕೊಡಬೇಕಿತ್ತು ಎನ್ನುವ ಅಭಿಪ್ರಾಯ ಕೇಳಿಬಂದಿದೆ.

ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡಿ ನಂತರದಲ್ಲಿ ಪ್ಯಾಕೇಜ್, ಸಾಲ ಸೌಲಭ್ಯಗಳ ಬಗ್ಗೆ ಮಾತನಾಡಬಹುದಿತ್ತು. ಸಂಕಷ್ಟದ ಹೊತ್ತಲ್ಲಿ ಬೆಳೆ ನಷ್ಟ ಉಂಟಾಗಿರುವುದು ರೈತರನ್ನು ಬಹುದೊಡ್ಡ ಸಂಕಷ್ಟಕ್ಕೆ ದೂಡಿದೆ.

ಮೊದಲೇ ಬೆಳೆ ನಷ್ಟದ ಸಂಕಷ್ಟದಲ್ಲಿರುವ ರೈತರು ಮತ್ತೆ ಹೊಸ ಸಾಲ ಪಡೆಯಬೇಕಿದೆ. ರೈತರ ಈಗಿನ ಸಾಲ ಮನ್ನಾ ಮಾಡಿ ಬೆಳೆ ನಷ್ಟ ಪರಿಹಾರ ನೀಡಿದ್ದರೆ ಪ್ಯಾಕೇಜ್ ನಿಂದ ಅನುಕೂಲವಾಗುತ್ತಿತ್ತು. ಇದು ಪ್ರಯೋಜನವಿಲ್ಲದ ಪ್ಯಾಕೇಜ್ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...