alex Certify BIG NEWS: ಹೊರೆಯಾಗಿ ಪರಿಣಮಿಸಿದೆ ‘ವರ್ಕ್‌ ಫ್ರಮ್ ಹೋಂʼ – ಅವಧಿ ಮೀರಿ ಕೆಲಸ ಮಾಡಿ ದಣಿಯುತ್ತಿದ್ದಾರೆ ಉದ್ಯೋಗಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೊರೆಯಾಗಿ ಪರಿಣಮಿಸಿದೆ ‘ವರ್ಕ್‌ ಫ್ರಮ್ ಹೋಂʼ – ಅವಧಿ ಮೀರಿ ಕೆಲಸ ಮಾಡಿ ದಣಿಯುತ್ತಿದ್ದಾರೆ ಉದ್ಯೋಗಿಗಳು

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಜನರ ಜೀವನ ಶೈಲಿಯನ್ನೇ ಬದಲಿಸಿದೆ. ಇದರ ನಿಯಂತ್ರಣಕ್ಕಾಗಿ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ವ್ಯಾಪಾರ – ವಹಿವಾಟುಗಳು ಸ್ಥಗಿತಗೊಂಡು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದೀಗ ಲಾಕ್ ಡೌನ್ ಸಡಿಲಿಕೆಗೊಂಡು ಜನಜೀವನ ಯಥಾಸ್ಥಿತಿಗೆ ಮರಳುತ್ತಿದ್ದರೂ ಸಹ ಈ ಮೊದಲಿದ್ದ ಕೊರೊನಾ ಪೂರ್ವ ಸ್ಥಿತಿಗೆ ಮರಳುವುದು ಅಷ್ಟು ಸುಲಭವಲ್ಲ.

ಇದರ ಮಧ್ಯೆ ಐಟಿ ಕಂಪನಿಗಳು ಸೇರಿದಂತೆ ಬಹಳಷ್ಟು ಕಂಪನಿಗಳು ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಮ್ ಹೋಮ್’ ಆರಂಭಿಸಿದ್ದು, ಲಾಕ್ ಡೌನ್ ಸಡಿಲಿಕೆಯಾದರೂ ಸಹ ಈ ನಿಯಮ ಮುಂದುವರೆದಿದೆ. ಮೂಲಗಳ ಪ್ರಕಾರ ಇನ್ನು ಹಲವು ಕಾಲ ಇದೇ ಪದ್ಧತಿ ಮುಂದುವರೆಯಲಿದೆ ಎನ್ನಲಾಗಿದೆ. ಇದು ಕಂಪನಿಗಳಿಗೆ ಲಾಭದಾಯಕವಾಗಿ ಪರಿಣಮಿಸಿದರೆ ಉದ್ಯೋಗಿಗಳಿಗೆ ಹೊರೆಯಾಗುತ್ತಿದೆ. ’ವರ್ಕ್ ಫ್ರಮ್ ಹೋಮ್’ ನಿಂದಾಗಿ ಕಂಪನಿಗಳ ಕೆಲಸ ಕಾರ್ಯಗಳು ಈ ಮೊದಲಿನಂತೆ ನಿಗದಿತವಾಗಿ ನಡೆಯುತ್ತಿದ್ದು, ಜೊತೆಗೆ ಆರ್ಥಿಕವಾಗಿಯೂ ಲಾಭದಾಯಕವಾಗಿ ಪರಿಣಮಿಸಿದೆ. ಕಚೇರಿ ಖರ್ಚುವೆಚ್ಚಗಳು ಉಳಿತಾಯವಾಗುವುದರೊಂದಿಗೆ ಉದ್ಯೋಗಿಗಳಿಗೆ ನೀಡಬೇಕಾದ ಹಲವು ಸೌಲಭ್ಯಗಳಿಗೂ ತೆರೆಬಿದ್ದಿದೆ.

ಆದರೆ ‘ವರ್ಕ್ ಫ್ರಮ್ ಹೋಮ್’ ನಿಂದಾಗಿ ಉದ್ಯೋಗಿಗಳು ಪರಿತಪಿಸುತ್ತಿದ್ದು, ಪ್ರತಿನಿತ್ಯ 12 ಗಂಟೆಗಳಿಗೂ ಅಧಿಕ ಕಾಲ ಕಾರ್ಯ ನಿರ್ವಹಿಸುವಂತಾಗಿದೆ. ಈ ಮೊದಲು ಕಚೇರಿಗೆ ತೆರಳುತ್ತಿದ್ದ ವೇಳೆ ಅಲ್ಲಿಂದ ಹೊರಬಂದ ನಂತರ ಯಾವುದೇ ಕೆಲಸ ಕಾರ್ಯಗಳು ಇರುತ್ತಿರಲಿಲ್ಲ. ಜೊತೆಗೆ ಶನಿವಾರ – ಭಾನುವಾರದ ರಜಾ ದಿನಗಳಂದು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಈಗ ‘ವರ್ಕ್ ಫ್ರಮ್ ಹೋಮ್’ ನಿಯಮದಿಂದಾಗಿ ರಜಾ ದಿನಗಳಂದೂ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ಈಗ ಹಂತಹಂತವಾಗಿ ಶಾಲಾ – ಕಾಲೇಜುಗಳು ಆರಂಭವಾಗುತ್ತಿದ್ದು, ಅವರನ್ನು ಸಿದ್ದಗೊಳಿಸಿ ಶಾಲೆಗೆ ಕಳಿಸುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಅದರಲ್ಲೂ ಪತಿ – ಪತ್ನಿ ಇಬ್ಬರೂ ಐಟಿ ಉದ್ಯೋಗದಲ್ಲಿದ್ದರೆ ಒಂದೇ ಮನೆಯಲ್ಲಿದ್ದರೂ ಸಹ ಪರಸ್ಪರ ಮಾತನಾಡಲು ಕೂಡ ಅವಕಾಶವಿಲ್ಲದಂತೆ ಕಾರ್ಯ ನಿರ್ವಹಿಸಬೇಕಾದ ಒತ್ತಡ ಎದುರಿಸುತ್ತಿದ್ದಾರೆ.

ಈ ರಾಜ್ಯದ ಮೂರು ನಗರಗಳಲ್ಲಿ ಮತ್ತೆ ಘೋಷಣೆಯಾಗುತ್ತಾ ಲಾಕ್ ​ಡೌನ್…?

ಕಚೇರಿಗೆ ತೆರಳಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಸರ್ಕಾರದ ನಿಯಮಾವಳಿಗಳು ಅನ್ವಯವಾಗುತ್ತಿದ್ದ ಕಾರಣ ಕಂಪನಿಗಳು ಅವನ್ನು ಅನುಸರಿಸಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ 8 ಗಂಟೆಯ ಕೆಲಸದ ಅವಧಿಯನ್ನು ಮೀರಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಬೇಕಾದ ಸಂದರ್ಭದಲ್ಲಿ ಅದಕ್ಕೆ ವಿಶೇಷ ಭತ್ಯೆಯನ್ನು ನೀಡಬೇಕಾಗಿತ್ತು. ಜೊತೆಗೆ ಹಬ್ಬ – ಹರಿದಿನಗಳು ಹಾಗೂ ಶನಿವಾರ – ಭಾನುವಾರಗಳಂದು ಕೆಲಸ ನಿರ್ವಹಿಸಲು ಯಾವುದೇ ಒತ್ತಡ ಹೇರುವಂತಿರಲಿಲ್ಲ.

ಈಗ ಇದೆಲ್ಲದಕ್ಕೂ ತಿಲಾಂಜಲಿ ಬಿದ್ದಿದೆ. ಉದ್ಯೋಗಿಗಳು ರಜಾ ದಿನಗಳಂದೂ ಸೇರಿದಂತೆ ನಿಗದಿತ ಅವಧಿಯನ್ನು ಮೀರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಉದ್ಯೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. ಹೀಗಾಗಿ ಕಂಪನಿಗಳು ಈಗಲಾದರೂ ಎಚ್ಚೆತ್ತುಕೊಂಡು ತನ್ನ ಉದ್ಯೋಗಿಗಳ ಮೇಲೆ ಅನಗತ್ಯವಾಗಿ ಒತ್ತಡ ಹೇರುವುದನ್ನು ನಿಲ್ಲಿಸುವುದು ಸೂಕ್ತ. ಜೊತೆಗೆ ಸರ್ಕಾರಗಳೂ ಕೂಡಾ ‘ವರ್ಕ್ ಪ್ರಮ್ ಹೋಂ’ ಕುರಿತಂತೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸುವ ಮೂಲಕ ಉದ್ಯೋಗಿಗಳ ನೆರವಿಗೆ ನಿಲ್ಲಬೇಕಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವರ್ಕ್‌ ಫ್ರಮ್‌ ಹೋಂ ಕುರಿತಂತೆ ಸೂಕ್ತ ನಿಯಾಮಾವಳಿಗಳನ್ನು ರೂಪಿಸಬೇಕಾಗಿತ್ತಾದರೂ ಆ ಕಾರ್ಯವಿನ್ನೂ ಸಮರ್ಪಕವಾಗಿ ಆಗಿಲ್ಲ. ಹೀಗಾಗಿ ವರ್ಕ್ ಪ್ರಮ್‌ ಹೋಂ ಉದ್ಯೋಗಿಗಳು ಅನಿವಾರ್ಯವಾಗಿ ಒತ್ತಡದಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...