alex Certify BIG NEWS: ಗ್ರಾಹಕರಿಗೆ ದಂಡ, ಶುಲ್ಕದಿಂದಲೇ 35 ಸಾವಿರ ಕೋಟಿ ರೂ. ಸಂಗ್ರಹಿಸಿದ ಬ್ಯಾಂಕುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗ್ರಾಹಕರಿಗೆ ದಂಡ, ಶುಲ್ಕದಿಂದಲೇ 35 ಸಾವಿರ ಕೋಟಿ ರೂ. ಸಂಗ್ರಹಿಸಿದ ಬ್ಯಾಂಕುಗಳು

ನವದೆಹಲಿ: ಬ್ಯಾಂಕುಗಳಲ್ಲಿ ಗ್ರಾಹಕರಿಗೆ ದಂಡ, ಶುಲ್ಕಗಳಿಂದಲೇ ಬರೋಬ್ಬರಿ 35,587 ಕೋಟಿ ರೂ. ಸಂಗ್ರಹಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ಪ್ರಮುಖ 5 ಖಾಸಗಿ ಬ್ಯಾಂಕುಗಳು ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳಲು ವಿಫಲವಾದ ಖಾತೆದಾರರಿಂದ 21,044 ಕೋಟಿ ರೂ.ಗೂ ಹೆಚ್ಚು ಹಣವನ್ನು ಸಂಗ್ರಹಿಸಿವೆ. ಮಿತಿಗಿಂತ ಹೆಚ್ಚಿನ ಸಲ ಎಟಿಎಂ ಬಳಕೆ ಶುಲ್ಕ, ಎಸ್ಎಂಎಸ್ ಸೇವೆಗೆ ಶುಲ್ಕ ಸೇರಿದಂತೆ ವಿವಿಧ ದಂಡ, ಶುಲ್ಕಗಳ ಮೂಲಕ ಬ್ಯಾಂಕುಗಳು 2018 ರಿಂದ 35,587.68 ಕೋಟಿ ರೂ. ಸಂಗ್ರಹಿಸಿವೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರಾಡ್ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಸಂಸದೆ ಆಮೀಯ ಯಾಗ್ನಿಕ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್, ಹೆಚ್.ಡಿ.ಎಫ್.ಸಿ. ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್ ನೀಡಿರುವ ಅಂಕಿ ಅಂಶಗಳ ಆಧರಿಸಿ ಈ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.

ಮಾಸಿಕ ಸರಾಸರಿ ಬ್ಯಾಲೆನ್ಸ್ ಕಾಯ್ದುಕೊಳ್ಳದ ಖಾತೆದಾರರಿಗೆ ಬ್ಯಾಂಕುಗಳು ದಂಡ ವಿಧಿಸುತ್ತವೆ. ಮಹಾನಗರಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ 3 ಸಾವಿರ ರೂ. ನಿಂದ 10,000 ರೂ. ವರೆಗೆ ಇದೆ. ನಗರ ಪ್ರದೇಶಗಳಲ್ಲಿ 2ರಿಂದ 5000 ರೂ. ವರೆಗೆ, ಗ್ರಾಮೀಣ ಪ್ರದೇಶಗಳಲ್ಲಿ 500 ರಿಂದ 1000 ರೂ. ವರೆಗೆ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಿದೆ.

ದಂಡದ ಪ್ರಮಾಣ 400 ರಿಂದ 500 ರೂಪಾಯಿವರೆಗೆ ಇದೆ. ಕೆಲವು ಖಾಸಗಿ ಬ್ಯಾಂಕುಗಳು ದೊಡ್ಡ ಪ್ರಮಾಣದ ಒಂದು ವ್ಯವಹಾರಕ್ಕೆ 100 ರಿಂದ 125 ರೂ. ಶುಲ್ಕ ವಿಧಿಸುತ್ತವೆ.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಖಾತೆದಾರರಿಗೆ ಮಿನಿಮಮ್ ಬ್ಯಾಲೆನ್ಸ್ ನಿಯಮ ಅನ್ವಯವಾಗುವುದಿಲ್ಲ. ತಿಂಗಳಿಗೆ 4 ಸಲ ವಿತ್ ಡ್ರಾ ಮಾಡಲು ಅವಕಾಶ ಇದ್ದು, ಒಂದು ಸಲ ಎಟಿಎಂ ಬಳಸಬಹುದು.

ಗ್ರಾಹಕರು ಸಾಮಾನ್ಯವಾಗಿ ಸ್ವಂತ ಬ್ಯಾಂಕ್ ಎಟಿಎಂಗಳಲ್ಲಿ ಐದು ಉಚಿತ ವಹಿವಾಟು ಪಡೆಯುತ್ತಾರೆ. ಇತರೆ ಬ್ಯಾಂಕ್ ಎಟಿಎಂಗಳಿಂದ ನಿಗದಿತ ಸಂಖ್ಯೆಯ ಉಚಿತ ವಹಿವಾಟು ಮಾಡಬಹುದು. ಈ ಮಿತಿ ಮೀರಿದಲ್ಲಿ ಪ್ರತಿ ವಹಿವಾಟಿಗೂ ಬ್ಯಾಂಕುಗಳು ಶುಲ್ಕ ವಿಧಿಸುತ್ತದೆ.

2015ರ ಜುಲೈ 1ರ ಆರ್‌ಬಿಐ ಪ್ರಕಟಣೆಯಂತೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಉಳಿಸಿಕೊಳ್ಳದವರಿಗೆ ದಂಡ ವಿಧಿಸಲು ಬ್ಯಾಂಕ್ ಗಳಿಗೆ ಅವಕಾಶವಿದೆ. ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಳ್ಳದ ಗ್ರಾಹಕರಿಗೆ 21,044.04 ಕೋಟಿ ರೂ., ಉಚಿತ ಮಿತಿಗಿಂತ ಹೆಚ್ಚು ಬಾರಿ ಎಟಿಎಂ ಬಳಕೆ ಮಾಡಿದ ಗ್ರಾಹಕರಿಗೆ 8,289.32 ಕೋಟಿ ರೂ., ಎಸ್ಎಂಎಸ್ ಸೇವೆಗಳಿಗೆ 6,254.32 ಕೋಟಿ ರೂಪಾಯಿ ದಂಡ, ಶುಲ್ಕ ಸಂಗ್ರಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...