ಕೊಡಗು: ಚಲಿಸುತ್ತಿದ ಬಸ್ ನಲ್ಲಿಯೇ ಚಾಲಕನಿಗೆ ಹೃದಯಾಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಬಸ್ ಅಪಘಾತಕ್ಕೀಡಾದರೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ತಾಳತ್ ಮನೆ ಬಳಿ ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಯ ದಿಣ್ಣೆಗೆ ಡಿಕ್ಕಿ ಹೊಡೆದು ನಿಂತಿದೆ.
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈ ಘಟನೆ ನಡೆದಿದೆ. ‘ಪೂರ್ಣಿಮಾ ಟ್ರಾವೆಲ್ಸ್’ ಬಸ್ ಚಲಿಸುತ್ತಿದ್ದಾಗ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ದಿಣ್ಣೆಗೆ ಡಿಕ್ಕಿ ಹೊಡೆದಿದೆ.
ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿಯೇ ಇದ್ದಾರೆ. ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲನೆ ವೇಳೆಯೇ ಚಾಲಕ ಸಾವನ್ನಪ್ಪಿದ್ದರೂ, ಬಸ್ ದೊಡ್ಡ ಪ್ರಪಾತಕ್ಕೆ ಬೀಳದೆ ದಿಣ್ಣೆಗೆ ಗುದ್ದಿದ್ದರಿಂದ ಭೀಕರ ದುರಂತವೊಂದು ತಪ್ಪಿದಂತಾಗಿದೆ.

