ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಲೀಗ್ ಹಂತ ರೋಚಕ ಘಟ್ಟ ತಲುಪಿದ್ದು, ಯಾವ ನಾಲ್ಕು ತಂಡಗಳು ಪ್ಲೇಆಫ್ ಟಿಕೆಟ್ ಪಡೆದುಕೊಳ್ಳಲಿವೆ ಎಂಬ ಕುತೂಹಲ ಮೂಡಿದೆ.
ಮೇ 31ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಈ ಬಾರಿಯ ಟೂರ್ನಿಗೆ ತೆರೆ ಬೀಳಲಿದೆ. ಈ ಟೂರ್ನಿ ಬಳಿಕ ಭಾರತದ ಅಂತಾರಾಷ್ಟ್ರೀಯ ಪಂದ್ಯಗಳು ಆರಂಭವಾಗಲಿದ್ದು, ಜೂನ್ ಅಂತ್ಯದಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ ಟ್ವೆಂಟಿ ಹಾಗೂ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳನ್ನು ಭಾರತ ಆಡಲಿದೆ.
ಈ ಸಲುವಾಗಿ ಬಿಸಿಸಿಐ ಆಯ್ಕೆಗಾರರು ಮಹತ್ತರವಾದ ತೀರ್ಮಾನವೊಂದನ್ನು ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಟಿ ಟ್ವೆಂಟಿ ನಾಯಕತ್ವದ ಬದಲಾವಣೆ ನಡೆಯಲಿದೆ ಎನ್ನಲಾಗಿದೆ.
ಈ ವರದಿಯ ಪ್ರಕಾರ ಬಿಸಿಸಿಐ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಕಳೆದ ಐಪಿಎಲ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಯಶಸ್ಸು ಸಾಧಿಸಿದ ನಾಯಕ ಶ್ರೇಯಸ್ ಐಯ್ಯರ್‌ಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲು ಮುಂದಾಗಿದೆ ಎನ್ನಲಾಗಿದೆ.
ಇನ್ನು ಈ ಬದಲಾವಣೆಯ ತೀರ್ಮಾನಕ್ಕೆ ಕಾರಣ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ವೈಫಲ್ಯ ಎನ್ನಲಾಗಿದೆ. ನಾಯಕತ್ವ ವಹಿಸಿಕೊಂಡ ಬಳಿಕ ಸೂರ್ಯ 45 ಪಂದ್ಯಗಳನ್ನಾಡಿದ್ದು, ಕೇವಲ 932 ರನ್ ಕಲೆಹಾಕಿದ್ದಾರೆ. ಇನ್ನು ಇದೇ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಭಾರತ ಸೂರ್ಯಕುಮಾರ್ ನಾಯಕತ್ವದಡಿಯಲ್ಲಿ ಚಾಂಪಿಯನ್ ಆಯಿತಾದರೂ ಇದಕ್ಕೆ ಸೂರ್ಯ ನಾಯಕತ್ವಕ್ಕಿಂತ ಇತರೆ ಆಟಗಾರರ ಅಬ್ಬರದ ಪ್ರದರ್ಶನ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಟಿ20 ವಿಶ್ವಕಪ್‌ನಲ್ಲಿ 9 ಇನ್ನಿಂಗ್ಸ್ ಆಡಿದ ಸೂರ್ಯ ಒಟ್ಟು 242 ರನ್ ಕಲೆಹಾಕಿದ್ದರು. ಯುಎಸ್‌ಎ ತಂಡದ ವಿರುದ್ಧ ಹರಿದುಬಂದ 84 ರನ್ ಅತ್ಯಧಿಕ ರನ್. ಇದನ್ನು ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಸೂರ್ಯ ಕೊಡುಗೆ ತಂಡದ ಮೇಲೆ ಹೆಚ್ಚೇನೂ ಪರಿಣಾಮ ಬೀರಿಲ್ಲ.
ಹೀಗೆ ನಾಯಕತ್ವ ವಹಿಸಿಕೊಂಡಾಗಿನಿಂದಲೂ ಕಳಪೆಯಾಗಿರುವ ಕಾರಣ ಸೂರ್ಯರನ್ನು ಕೈಬಿಡಲು ಆಯ್ಕೆಗಾರರು ತೀರ್ಮಾನಿಸಿದ್ದಾರೆ. 2028ರಲ್ಲಿ ಟಿ ಟ್ವೆಂಟಿ ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಎರಡೂ ಸಹ ನಡೆಯುವುದರಿಂದ ಬಲಿಷ್ಠ ನಾಯಕನ ಅಡಿಯಲ್ಲಿ ಬಲಿಷ್ಠ ತಂಡವನ್ನು ಸಿದ್ಧಪಡಿಸುವುದು ತಂಡದ ಗುರಿಯಾಗಿದೆ.

