ಮೈಸೂರು: ಕಪಿಲಾ ನದಿಯ ದಡದಲ್ಲಿ ಅರಣ್ಯ ಇಲಾಖೆ ಬೆಳೆಸಿದ್ದ ೪೫ ಮರಗಳನ್ನು ಕಡಿದಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಆಲತ್ತೂರು ಗ್ರಾಮದ ಕೃಷ್ಣ (45) ಬಂಧಿತ ಆರೋಪಿ. ಹೆಜ್ಜಿಗೆ ಗ್ರಾಮದ ಕಪಿಲಾ ನದಿ ದಡದಲ್ಲಿ ಬೆಳೆಯಲಾಗಿದ್ದ 45 ವಿವಿಧ ರೀತಿಯ ಮರಗಳನ್ನು ಯಾವುದೇ ಅನುಮತಿ ಇಲ್ಲದೇ ಮಾರ್ಚ್ 8ರಂದು ಕಡಿಯಲಾಗಿತ್ತು. ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು.
ಘಟನೆ ನಡೆದು ಹಲವು ದಿನಗಳು ಕಳೆದರೂ ಆರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಅರಣ್ಯ ಸಚಿವ ಈಶ್ವರ ಖಂಡ್ರೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಸಚಿವರ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಇದೀಗ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.

