HomeLifestyleಅಡುಗೆಗೆ ಬಳಸುವ ತುಪ್ಪ ಶುದ್ಧವಾಗಿದೆಯೇ? ಈ ಒಂದು ಸಣ್ಣ ಟೆಸ್ಟ್ ಮೂಲಕ ಅಸಲಿ ಮತ್ತು ನಕಲಿ...

ಅಡುಗೆಗೆ ಬಳಸುವ ತುಪ್ಪ ಶುದ್ಧವಾಗಿದೆಯೇ? ಈ ಒಂದು ಸಣ್ಣ ಟೆಸ್ಟ್ ಮೂಲಕ ಅಸಲಿ ಮತ್ತು ನಕಲಿ ತುಪ್ಪ ಗುರುತಿಸಿ

ಭಾರತೀಯ ಅಡುಗೆಮನೆಗಳಲ್ಲಿ ತುಪ್ಪಕ್ಕೆ ವಿಶೇಷ ಸ್ಥಾನವಿದೆ. ನಿತ್ಯದ ಊಟದ ರುಚಿ ಹೆಚ್ಚಿಸುವುದರಿಂದ ಹಿಡಿದು ಆರೋಗ್ಯ ವೃದ್ಧಿಸುವವರೆಗೆ ತುಪ್ಪವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಲಬೆರಕೆ ಆಹಾರ ಪದಾರ್ಥಗಳ ಹಾವಳಿ ವಿಪರೀತವಾಗುತ್ತಿದ್ದು, ನಾವು ಬಳಸುವ ತುಪ್ಪ ಎಷ್ಟು ಶುದ್ಧವಾಗಿದೆ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಇದೇ ಹಿನ್ನೆಲೆಯಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಂದರೆ ಎಫ್ಎಸ್‌ಎಸ್‌ಎಐ ನಕಲಿ ತುಪ್ಪವನ್ನು ಸುಲಭವಾಗಿ ಗುರುತಿಸಲು ಪರೀಕ್ಷೆಯೊಂದನ್ನು ತಿಳಿಸಿಕೊಟ್ಟಿದೆ.

ಲಾಭದ ಆಸೆಗೆ ಬಿದ್ದ ಕೆಲವರು ಅಸಲಿ ತುಪ್ಪಕ್ಕೆ ಕಡಿಮೆ ಬೆಲೆಯ ವನಸ್ಪತಿ, ಹೈಡ್ರೋಜನೇಟೆಡ್ ಕೊಬ್ಬು ಅಥವಾ ಇತರೆ ಅಡುಗೆ ಎಣ್ಣೆಗಳನ್ನು ಮಿಶ್ರಣ ಮಾಡುತ್ತಿದ್ದಾರೆ. ಇಂತಹ ನಕಲಿ ತುಪ್ಪದ ಸೇವನೆಯಿಂದ ದೇಹಕ್ಕೆ ಸಿಗಬೇಕಾದ ಪೋಷಕಾಂಶಗಳು ಸಿಗುವುದಿಲ್ಲ ಸರಿ, ಜೊತೆಗೆ ಇದು ಆರೋಗ್ಯಕ್ಕೆ ದೊಡ್ಡ ಮಟ್ಟದ ಹಾನಿ ಉಂಟುಮಾಡುತ್ತದೆ.

ತುಪ್ಪದ ಅಸಲಿತನ ಪರೀಕ್ಷಿಸುವುದು ಹೇಗೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಫ್ಎಸ್‌ಎಸ್‌ಎಐ ತನ್ನ ಅಧಿಕೃತ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ತುಪ್ಪದಲ್ಲಿ ವನಸ್ಪತಿ ಅಥವಾ ನಕಲಿ ಕೊಬ್ಬು ಮಿಶ್ರಣವಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಈ ಸರಳ ಪ್ರಯೋಗವನ್ನು ಮಾಡಬಹುದು.

ಒಂದು ಗಾಜಿನ ಪ್ರಕಟನಾಳ ಅಥವಾ ಸಣ್ಣ ಪಾರದರ್ಶಕ ಗಾಜಿನ ಪಾತ್ರೆಯಲ್ಲಿ ಒಂದು ಮಿಲಿ ಲೀಟರ್ ಕರಗಿಸಿದ ತುಪ್ಪವನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಮಿಲಿ ಲೀಟರ್ ಸಾಂದ್ರೀಕೃತ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಅರ್ಧ ಚಮಚ ಸಕ್ಕರೆಯನ್ನು ಸೇರಿಸಿ. ಈ ಮಿಶ್ರಣವನ್ನು ಕನಿಷ್ಠ ಎರಡು ನಿಮಿಷಗಳ ಕಾಲ ಚೆನ್ನಾಗಿ ಅಲ್ಲಾಡಿಸಿ. ನಂತರ ಕೆಲವು ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ.

ಮಿಶ್ರಣವು ಸ್ಥಿರವಾದ ನಂತರ, ಆಸಿಡ್ ಪದರವು ಯಾವುದೇ ಬಣ್ಣ ಬದಲಾಗದೆ ಹಾಗೇ ಇದ್ದರೆ ನೀವು ಬಳಸುತ್ತಿರುವ ತುಪ್ಪ ಶುದ್ಧವಾಗಿದೆ ಎಂದರ್ಥ. ಒಂದು ವೇಳೆ ಆಸಿಡ್ ಪದರವು ಗಾಢ ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿದರೆ, ಆ ತುಪ್ಪದಲ್ಲಿ ವನಸ್ಪತಿ ಅಥವಾ ಹೈಡ್ರೋಜನೇಟೆಡ್ ಫ್ಯಾಟ್ ಮಿಶ್ರಣವಾಗಿದೆ ಎಂಬುದು ಸಾಬೀತಾಗುತ್ತದೆ.

ಬಣ್ಣ ಬದಲಾಗಲು ಕಾರಣವೇನು

ಹೈಡ್ರೋಕ್ಲೋರಿಕ್ ಆಮ್ಲವು ಸಕ್ಕರೆಯಲ್ಲಿರುವ ಕಣಗಳನ್ನು ಗ್ಲುಕೋಸ್ ಮತ್ತು ಫ್ರಕ್ಟೋಸ್ ಆಗಿ ವಿಭಜಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಘಟಕಗಳು ವನಸ್ಪತಿ ಅಥವಾ ಎಳ್ಳೆಣ್ಣೆಯಲ್ಲಿ ಇರುವ ಫೀನಾಲ್ ಸಂಯುಕ್ತಗಳೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತವೆ. ಈ ಕಾರಣದಿಂದಾಗಿ ನಕಲಿ ತುಪ್ಪವಿದ್ದಾಗ ಮಿಶ್ರಣವು ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ ಎಂದು ಎಫ್ಎಸ್‌ಎಸ್‌ಎಐ ವಿವರಿಸಿದೆ.

ಸಾವಿರಾರು ಲೀಟರ್ ನಕಲಿ ತುಪ್ಪ ವಶ

ದೇಶಾದ್ಯಂತ ನಕಲಿ ತುಪ್ಪದ ಜಾಲ ವ್ಯಾಪಿಸುತ್ತಿರುವುದಕ್ಕೆ ಇತ್ತೀಚೆಗೆ ನಡೆದ ದಾಳಿಗಳೇ ಸಾಕ್ಷಿ. ದೆಹಲಿ ಮತ್ತು ಹರಿಯಾಣದ ವಿವಿಧ ಭಾಗಗಳಲ್ಲಿ ಎಫ್ಎಸ್‌ಎಸ್‌ಎಐ ಅಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, ಬರೋಬ್ಬರಿ ಆರು ಸಾವಿರದ ಐನ್ನೂರು ಲೀಟರ್‌ಗೂ ಅಧಿಕ ನಕಲಿ ತುಪ್ಪವನ್ನು ವಶಪಡಿಸಿಕೊಂಡಿದ್ದಾರೆ. ಮಾರುಕಟ್ಟೆಗೆ ಸರಬರಾಜು ಮಾಡಲು ಸಿದ್ಧವಾಗಿದ್ದ ಈ ತುಪ್ಪದಲ್ಲಿ ಡೈರಿ ಉತ್ಪನ್ನಗಳ ಬದಲಾಗಿ ಅಗ್ಗದ ಸಸ್ಯಜನ್ಯ ಎಣ್ಣೆಗಳನ್ನು ವ್ಯಾಪಕವಾಗಿ ಬಳಸಿರುವುದು ಪತ್ತೆಯಾಗಿದೆ. ಆದ್ದರಿಂದ ಗ್ರಾಹಕರು ತುಪ್ಪವನ್ನು ಖರೀದಿಸುವಾಗ ಜಾಗರೂಕರಾಗಿರುವುದು ಅತ್ಯಗತ್ಯ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular