ಶಿವಮೊಗ್ಗ: 2019ರಂದು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆ ವೇಳೆ ಆಪರೇಷನ್ ಕಮಲದ ಮೂಲಕ ಬಿಜೆಪಿ ಕುದುರೆ ವ್ಯಾಪಾರ ನಡೆಸಿ ಕಾಂಗ್ರೆಸ್ ನ 17 ಶಾಸಕರನ್ನು ತಮ್ಮತ್ತ ಸೆಳೆದು ಸರ್ಕಾರ ರಚನೆ ಮಾಡಿತ್ತು. ಆಪರೇಷನ್ ಕಮಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ವಾಗ್ದಾಳಿ ನಡೆಸಿದ್ದವು. ಆದರೆ ಬಿಜೆಪಿ ಮಾತ್ರ ಇದನ್ನು ಅಂದು ಅಲ್ಲಗಳೆದಿತ್ತು. ಆದರೀಗ ಮಾಜಿ ಸಚಿವ, ಬಿಜೆಪಿಯಿಂದ ಉಚ್ಛಾಟಿತ ನಾಯಕ ಕೆ.ಎಸ್. ಈಶ್ವರಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರಿಂದ ಅಡ್ಡ ಮತದಾನವಾಗಿರುವುದಕ್ಕೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ನಿರ್ಧಾರಕ್ಕೆ ಬಂದಿರುವುದು ಸೂಕ್ತವಲ್ಲ ಎಂದರು.
ಈ ಹಿಂದೆ 17 ಕಾಂಗ್ರೆಸ್ ಶಾಸಕರಿಗೆ ಹಣ ನೀಡಿ ಖರೀದಿಸಿ ನಾವು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದೆವು. ಆ ನಿರ್ಧಾರದಿಂದ ಆಗ ನಮಗೆ ತಾತ್ಕಾಲಿಕ ಜಯ ಸಿಕ್ಕಿತ್ತಾದರೂ ಅಂತಿಮವಾಗಿ ನಮ್ಮ ಸರ್ಕಾರ ಹಾಳಾಗಲು ಅದುವೇ ಕಾರಣವಾಯಿತು ಎಂದು ಹೇಳಿದ್ದಾರೆ. ಈಶ್ವರಪ್ಪ ಅವರ ಈ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಕೋಟ್ಯಂತರ ಭಕ್ತರು ಇದ್ದಾರೆ. ಹೀಗಾಗಿ ಮೊದಲು ಆಣೆ-ಪ್ರಮಾಣದ ಈ ನಿರ್ಧಾರದಿಂದ ವಿಜಯೇಂದ್ರ ಹಿಂದೆ ಸರಿಯಬೇಕು. ಅಡ್ಡ ಮತದಾನ ಮಾಡಿದವರು ಮಂಜುನಾಥನ ಮುಂದೆ ಆಣೆ ಮಾಡಿ, ಅಣ್ಣಪ್ಪ ಸ್ವಾಮಿ ಮುಂದೆ ಕ್ಷಮೆ ಕೇಳಿದರೆ ಯಾವುದೇ ಬೆಲೆ ಇರಲ್ಲ. ಹಿಂದೆ ಶಿವಮೊಗ್ಗ ವಾರ್ಡ್ ಚುನಾವಣೆ ವೇಳೆ ಆಣೆ ಪ್ರಮಾಣ ನಡೆದಿತ್ತು. ಅಭ್ಯರ್ಥಿಯೊಬ್ಬ ಸಿಗಂದೂರು ಚೌಡೇಶ್ವರಿ ದೇವಿಯ ಫೋಟೋ ನೀಡಿ, 5 ರೂಪಾಯಿ ಕೊಟ್ಟು ಮತಹಾಕುವಂತೆ ಆಣೆ ಪ್ರಮಾಣ ಮಾಡಿಸಿದ್ದ. ಮರುದಿನ ಮತ್ತೊಬ್ಬ ಅಭ್ಯರ್ಥಿ ಮಾರಮ್ಮನ ಫೋಟೋ ಜೊತೆ 10 ರೂಪಾಯಿ ಕೊಟ್ಟು ಮತ ಹಾಕುವಂತೆ ಆಣೆ ಮಾಡಿಸಿದ್ದ. ಕೊನೆಗೆ 10 ರೂಪಾಯಿ ಕೊಟ್ಟವನೇ ಚುನಾವಣೆಯಲ್ಲಿ ಗೆದ್ದ ಎಂದು ಈಶ್ವರಪ್ಪ ಉದಾಹರಣೆ ಮೂಲಕ ವಿವರಿಸಿದ್ದಾರೆ. ಹಾಗಾಗಿ ಇಂತಹ ಆಣೆ-ಪ್ರಮಾಣ ಸರಿಯಲ್ಲ ಎಂದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ವಿಚಾರದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

