ಹೃದಯದ ಆರೋಗ್ಯ ಎಂದ ಕೂಡಲೇ ನಾವು ಯಾವುದೋ ಒಂದು ‘ಸೂಪರ್‌ಫುಡ್’ ಅಥವಾ ಹಣ್ಣು ತಿಂದರೆ ಸಾಕು ಎಂದು ಭಾವಿಸುತ್ತೇವೆ. ಆದರೆ ಇದು ಕೇವಲ ಒಂದು ಮಿಥ್ಯ ಅಥವಾ ತಪ್ಪು ಕಲ್ಪನೆ ಎನ್ನುತ್ತಾರೆ ತಜ್ಞರು. ದೆಹಲಿಯ ಏಮ್ಸ್ (AIIMS) ತರಬೇತಿ ಪಡೆದ ಗುರುಗ್ರಾಮದ ಪ್ರಖ್ಯಾತ ನರರೋಗ ತಜ್ಞೆ ಮತ್ತು ಸಾಮಾನ್ಯ ವೈದ್ಯೆ ಡಾ. ಪ್ರಿಯಾಂಕಾ ಸೆಹ್ರಾವತ್ ಅವರು ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ.
ಹೃದಯದ ಕಾಯಿಲೆ ‘ಮಲ್ಟಿಫ್ಯಾಕ್ಟೋರಿಯಲ್’ (Multifactorial): ಡಾ. ಪ್ರಿಯಾಂಕಾ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, “ನಿಮ್ಮನ್ನು ಪಾರ್ಶ್ವವಾಯು (Stroke) ಅಥವಾ ಹೃದಯಾಘಾತದಿಂದ ಉಳಿಸಲು ಕೇವಲ ಒಂದು ವಸ್ತು ಅಥವಾ ಆಹಾರದಿಂದ ಸಾಧ್ಯವಿಲ್ಲ. ಇವು ಹಲವು ಅಂಶಗಳ ಮೇಲೆ ಅವಲಂಬಿತವಾಗಿರುವ ಕಾಯಿಲೆಗಳು,” ಎಂದು ಸ್ಪಷ್ಟಪಡಿಸಿದ್ದಾರೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಮಲ್ಟಿಫ್ಯಾಕ್ಟೋರಿಯಲ್’ ಎಂದು ಕರೆಯಲಾಗುತ್ತದೆ. ಅಂದರೆ, ಇದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿರುತ್ತವೆ.
ಹೃದಯದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳು: ಕೇವಲ ಪೌಷ್ಟಿಕ ಆಹಾರ ಸೇವನೆಯಿಂದ ಹೃದಯ ರಕ್ಷಿಸಲು ಸಾಧ್ಯವಿಲ್ಲ. ಇದರ ಜೊತೆಗೆ ಕೆಳಗಿನ ಅಂಶಗಳು ಬಹಳ ಮುಖ್ಯ:
- ದೈನಂದಿನ ಚಟುವಟಿಕೆ: ನೀವು ಎಷ್ಟು ಸಕ್ರಿಯವಾಗಿದ್ದೀರಿ ಎಂಬುದು ಮುಖ್ಯ. ಕುಳಿತಲ್ಲೇ ಇರುವುದು ಅಪಾಯಕಾರಿ.
- ವ್ಯಸನಗಳು: ಧೂಮಪಾನ ಮತ್ತು ಮದ್ಯಪಾನವು ಯಾವುದೇ ಆರೋಗ್ಯಕರ ಆಹಾರದ ಪರಿಣಾಮವನ್ನು ಶೂನ್ಯಗೊಳಿಸಬಲ್ಲವು.
- ಒತ್ತಡ ನಿರ್ವಹಣೆ: ದಿನವಿಡೀ ಒತ್ತಡದಲ್ಲಿದ್ದರೆ, ನೀವು ಮಾಡುವ ವ್ಯಾಯಾಮದ ಲಾಭ ಕಡಿಮೆಯಾಗುತ್ತದೆ. ದಿನಕ್ಕೆ ಕನಿಷ್ಠ 5 ನಿಮಿಷ ಧ್ಯಾನ ಅಥವಾ ಯೋಗ ಮಾಡುವುದು ಅಗತ್ಯ.
- ನಿದ್ರೆ: ರಕ್ತದೊತ್ತಡದ ನಿರ್ವಹಣೆಗೆ ಗುಣಮಟ್ಟದ ನಿದ್ರೆ ಅತ್ಯಗತ್ಯ.
- ಇತರ ಕಾಯಿಲೆಗಳು: ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅನಿವಾರ್ಯ.
ತಜ್ಞರ ಸಲಹೆ: ಯಾವುದೋ ಒಂದು ‘ಮ್ಯಾಜಿಕ್ ಹಣ್ಣು’ ತಿಂದು ಹೃದಯ ರಕ್ಷಿಸಿಕೊಳ್ಳಬಹುದು ಎನ್ನುವ ಭ್ರಮೆಯಿಂದ ಹೊರಬನ್ನಿ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸರಿಯಾದ ನಿದ್ರೆ ಮತ್ತು ಒತ್ತಡವಿಲ್ಲದ ಜೀವನ – ಈ ಎಲ್ಲವೂ ಸೇರಿದಾಗ ಮಾತ್ರ ನಿಮ್ಮ ಹೃದಯ ಮತ್ತು ಮೆದುಳು ಆರೋಗ್ಯವಾಗಿರಲು ಸಾಧ್ಯ.

