ರಾಯಚೂರು: ರಾಜ್ಯದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯಕೀಯವಾಗಿ ‘ಫೀಟಸ್ ಇನ್ ಫೀಟು’ ಎಂದು ಕರೆಯಲಾಗುವ ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿ ಪ್ರಕರಣ ರಾಯಚೂರಿನಲ್ಲಿ ನಡೆದಿದೆ. ಏನಿದು ಪ್ರಕರಣ? ಇಲ್ಲಿದೆ ಮಾಹಿತಿ.
ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿದ್ದು, ಇದನ್ನು ಅತ್ಯಂತ ಅಪರೂಪದ ‘ಫೀಟಸ್ ಇನ್ ಫೀಟು’ ಪ್ರಕರಣ ಎಂದು ಕರೆಯಲಾಗುತ್ತದೆ. ಈ ಘಟನೆ ರಾಅಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.
ಸಹನಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವೇಳೆ ಈ ವಿಚಾರ ದೃಢಪಟ್ಟಿದೆ. ರಾಜ್ಯದಲ್ಲಿ ಇದು 3ನೇ ಪ್ರಕರಣವಾಗಿದೆ. 50 ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ಕಂಡುಬರುವ ಈ ಸಮಸ್ಯೆಗೆ ತುತ್ತಾದ ಮಗುವನ್ನು ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಾಗಿ ಬಳ್ಳಾರಿಯ ಬಿಎಂಸಿಆರ್‌ಸಿ ಆಸ್ಪತ್ರೆಗೆ ರವಾನಿಸಲಾಗಿದೆ.
ಎರಡು ತಿಂಗಳ ಗಂಡು ಮಗುವಿಗೆ ವಿಚಿತ್ರವಾಗಿ ಹೊಟ್ಟೆ ಉಬ್ಬಿತ್ತು. ಅಲ್ಲದೇ ಪದೇ ಪದೆ ವಾಂತಿ ಮಾಡುತ್ತಿತ್ತು. ಅನಾರೋಗ್ಯವಿರಬಹುದು ಎಂದು ಮಗುವನ್ನು ಚಿಕಿತ್ಸೆಗಾಗಿ ಇತ್ತೀಚೆಗೆ ಸಿಂಧನೂರು ನಗರದ ಸಹನಾ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕೆ.ಶಿವರಾಜ್ ಅವರು ಪ್ರಾಥಮಿಕ ತಪಾಸಣೆ ನಡೆಸಿದರು. ಮಗುವಿನ ಹೊಟ್ಟೆ ಅಸಹಜವಾಗಿ ಉಬ್ಬಿಕೊಂಡಿರುವ ಜತೆಗೆ ತೂಕ ಹಾಗೂ ದೈಹಿಕ ಬೆಳವಣಿಗೆಯಲ್ಲೂ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಅಗತ್ಯ ಪರೀಕ್ಷೆಗಳಿಗೆ ಸೂಚಿಸಿದರು.
ಮಗುವಿನ ಹೊಟ್ಟೆಯೊಳಗೆ ಗಡ್ಡೆಯಂತಿರುವ ರಚನೆ ಅಲ್ಟ್ರಾ ಸೌಂಡ್ ಸ್ಕ್ಯಾನ್ ವೇಳೆ ಪತ್ತೆಯಾಗಿದೆ. ಬಳಿಕ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ರೇಡಿಯಾಲಜಿಸ್ಟ್ ಡಾ.ವಿವೇಕ್ ಜೀರಂಕಳಿ ಸಮ್ಮುಖದಲ್ಲಿ ನಡೆಸಿದ ಸೂಕ್ಷ್ಮ ಪರಿಶೀಲನೆಯಲ್ಲಿ, ಅದು ಸಾಮಾನ್ಯ ಗಡ್ಡೆಯಲ್ಲ; ಭ್ರೂಣವನ್ನು ಹೋಲುವ ಆಕೃತಿಯಾಗಿದೆ ಎಂಬುದು ಗೊತ್ತಾಯಿತು.
ಮರುರಚನಾ ತಂತ್ರಜ್ಞಾನದ ನೆರವಿನಿಂದ ನಡೆಸಿದ ಪರೀಕ್ಷೆಗಳ ಬಳಿಕ, ಇದು ವೈದ್ಯಕೀಯವಾಗಿ ‘ಫೀಟಸ್ ಇನ್ ಫೀಟು’ ಎಂದು ಕರೆಯಲಾಗುವ ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿ ಎಂಬುದು ದೃಢಪಟ್ಟಿದೆ.
ಅವಳಿ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ರೂಪುಗೊಂಡ ಎರಡು ಭ್ರೂಣಗಳ ಪೈಕಿ ಒಂದರ ಬೆಳವಣಿಗೆ ಅಸಹಜವಾಗಿ ಸ್ಥಗಿತಗೊಂಡು, ಮತ್ತೊಂದು ಭ್ರೂಣದ ದೇಹದೊಳಗೆ ಸಿಲುಕಿಕೊಳ್ಳುವ ಸ್ಥಿತಿಯೇ ಈ ‘ಫೀಟಸ್ ಇನ್ ಫೀಟು’.
ಪ್ರತಿ 50 ಲಕ್ಷ ಮಕ್ಕಳಲ್ಲಿಒಬ್ಬರಿಗೆ ಈ ಅಪರೂಪದ ಸ್ಥಿತಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಭಾರತದ ವೈದ್ಯಕೀಯ ಜರ್ನಲ್‌ಗಳಲ್ಲಿಇದುವರೆಗೆ ವರದಿಯಾಗಿರುವ ಪ್ರಕರಣಗಳ ಸಂಖ್ಯೆ 230 ಮಾತ್ರ. ಕರ್ನಾಟಕದಲ್ಲಿಇದು ಮೂರನೇ ಪ್ರಕರಣವಾಗಿದೆ,’ ಎಂದು ವೈದ್ಯರು ವಿವರಿಸಿದ್ದಾರೆ.
ಈ ಮಗುವಿಗೆ ತುರ್ತು ಚಿಕಿತ್ಸೆ ಮತ್ತು ಹೆಚ್ಚಿನ ತಪಾಸಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ಬಿಎಂಸಿಆರ್‌ಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ನಡೆಸಲಿರುವ ರಕ್ತ ಪರೀಕ್ಷೆ ಹಾಗೂ ಇತರ ವೈದ್ಯಕೀಯ ಮೌಲ್ಯಮಾಪನಗಳ ನಂತರ ಶಸ್ತ್ರಚಿಕಿತ್ಸೆಯ ಅಗತ್ಯ ಹಾಗೂ ಅವಧಿಯನ್ನು ನಿರ್ಧರಿಸಲಾಗುತ್ತದೆ ಎಂದು ಡಾ.ಕೆ.ಶಿವರಾಜ್ ತಿಳಿಸಿದ್ದಾರೆ.

