ಲಕ್ನೋ ಅಡುಗೆ ಎಂದರೆ ಅದು ನವಾಬರ ಕಾಲದ ರಾಜವೈಭೋಗದ ರುಚಿಗೆ ಹೆಸರುವಾಸಿ. ಅದರಲ್ಲೂ ಲಕ್ನೋ ಶೈಲಿಯ ದಮ್ ಆಲೂ (Dum Aloo Lakhnavi) ಉಳಿದೆಲ್ಲಾ ಆಲೂಗಡ್ಡೆ ಖಾದ್ಯಗಳಿಗಿಂತ ಭಿನ್ನ ಮತ್ತು ಶ್ರೀಮಂತ ರುಚಿಯನ್ನು ಹೊಂದಿರುತ್ತದೆ. ಪನೀರ್ ತುಂಬಿದ ಆಲೂಗಡ್ಡೆ ಹಾಗೂ ಈರುಳ್ಳಿ-ಟೊಮೆಟೊದ ದಪ್ಪನೆಯ ಗ್ರೇವಿಯಿಂದ ಕೂಡಿರುವ ಈ ಖಾದ್ಯವು ಯಾವುದೇ ವಿಶೇಷ ಸಮಾರಂಭಗಳಿಗೆ ಅಥವಾ ಅತಿಥಿಗಳಿಗಾಗಿ ಮಾಡಲು ಅತ್ಯುತ್ತಮ ಆಯ್ಕೆಯಾಗಿದೆ.
ಅಗತ್ಯವಿರುವ ಸಾಮಗ್ರಿಗಳು: ಅರ್ಧ ಕೆಜಿ ಆಲೂಗಡ್ಡೆ, 100 ಗ್ರಾಂ ಪುಡಿ ಮಾಡಿದ ಪನೀರ್, 100 ಗ್ರಾಂ ಮಸೆದ ಆಲೂಗಡ್ಡೆ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ, ಕಸೂರಿ ಮೇಥಿ, ತುಪ್ಪ, ಬೆಣ್ಣೆ ಮತ್ತು ಫ್ರೆಶ್ ಕ್ರೀಮ್. ಗ್ರೇವಿ ತಯಾರಿಸಲು ಈರುಳ್ಳಿ ಪೇಸ್ಟ್ ಮತ್ತು ಟೊಮೆಟೊ ಪ್ಯೂರಿ ಅವಶ್ಯಕ.
ತಯಾರಿಸುವ ವಿಧಾನ: ಮೊದಲು ಆಲೂಗಡ್ಡೆಗಳ ನಡುವಿನ ಭಾಗವನ್ನು ಕೊರೆದು ತೆಗೆದು ಅದನ್ನು ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ಪಕ್ಕಕ್ಕಿಡಿ. ನಂತರ ಒಂದು ಪಾತ್ರೆಯಲ್ಲಿ ಮಸೆದ ಆಲೂಗಡ್ಡೆ ಮತ್ತು ಪುಡಿ ಮಾಡಿದ ಪನೀರ್ ಸೇರಿಸಿ ಚೆನ್ನಾಗಿ ಬೆರೆಸಿ, ಅದನ್ನು ಕರಿದ ಆಲೂಗಡ್ಡೆಯ ಒಳಗೆ ತುಂಬಿಸಿ (ಸ್ಟಫಿಂಗ್).
ಇನ್ನೊಂದು ಬದಿಯಲ್ಲಿ ಈರುಳ್ಳಿ ಪೇಸ್ಟ್ ಮತ್ತು ಮಸಾಲೆಗಳನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಂಡು ಈರುಳ್ಳಿ ಗ್ರೇವಿ ಸಿದ್ಧಪಡಿಸಿ. ಅದೇ ರೀತಿ ಟೊಮೆಟೊ ಪ್ಯೂರಿಯನ್ನು ಕೂಡ ತುಪ್ಪದಲ್ಲಿ ಬೇಯಿಸಿ ಗ್ರೇವಿ ತಯಾರಿಸಿ. ಈಗ ಈ ಎರಡೂ ಗ್ರೇವಿಗಳನ್ನು ಒಟ್ಟಿಗೆ ಸೇರಿಸಿ ಎಣ್ಣೆ ಬಿಡುವವರೆಗೆ ಬೇಯಿಸಿ. ನಂತರ ಗರಂ ಮಸಾಲಾ, ಮೆಣಸಿನ ಪುಡಿ, ಕಸೂರಿ ಮೇಥಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊನೆಯದಾಗಿ ಬೆಣ್ಣೆ ಮತ್ತು ಫ್ರೆಶ್ ಕ್ರೀಮ್ ಹಾಕಿ ಚೆನ್ನಾಗಿ ಬೆರೆಸಿ, ಸ್ಟಫ್ ಮಾಡಿದ ಆಲೂಗಡ್ಡೆಗಳನ್ನು ಮಸಾಲೆಯೊಳಗೆ ಹಾಕಿ 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿದರೆ ಘಮಘಮಿಸುವ ಲಕ್ನೋ ದಮ್ ಆಲೂ ಸವಿಯಲು ಸಿದ್ಧ.

