ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷವಾಗಿ ರಚಿಸಿರುವ ‘ಅಕ್ಕ ಪಡೆ’ಗೆ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಅಕ್ಕ ಪಡೆ 24/7 ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ. ತರಬೇತಿ ಪಡೆದ ಮಹಿಳಾ ಸಿಬ್ಬಂದಿ ಅಕ್ಕ ಪಡೆಯಲ್ಲಿ ಆಯ್ಕೆಯಾಗಿದ್ದು, ಶಾಲಾ-ಕಾಲೇಜು, ಮಾಲ್‌ಗಳು, ದೇವಸ್ಥಾನ, ಬಸ್ ಮತ್ತು ರೈಲ್ವೆ ನಿಲ್ದಾಣಗಳಂತಹ ಜನದಟ್ಟಣೆ ಪ್ರದೇಶಗಳಲ್ಲಿ ಗಸ್ತು ತಿರುಗಲಿದೆ” ಎಂದು ಹೇಳಿದರು.
“ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ಸಹಾಯ ಮಾಡಲು ಅಕ್ಕ ಪಡೆ ರಚಿಸಲಾಗಿದ್ದು, ಪೊಲೀಸ್ ಗಸ್ತು ವಾಹನಗಳ ಮಾದರಿಯಲ್ಲಿ ಇವು ಕಾರ್ಯನಿರ್ವಹಿಸುತ್ತದೆ. ಕಿರುಕುಳ ತಡೆಗಟ್ಟಲು ಮತ್ತು ಮಹಿಳೆಯರು/ ಮಕ್ಕಳಿಗೆ ಸುರಕ್ಷಿತ ವಾತಾವರಣ ಒದಗಿಸುವುದು ಪಡೆಯ ಗುರಿಯಾಗಿದೆ” ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಅಥವಾ ಮಕ್ಕಳಿಗೆ ಕಿರುಕುಳ, ದೌರ್ಜನ್ಯ ಅಥವಾ ಅಪಾಯ ಎದುರಾದಾಗ ಅಕ್ಕ ಪಡೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣೆ ನೀಡಲಿದೆ. ಸಂಕಷ್ಟದಲ್ಲಿರುವ ಮಹಿಳೆಯರಿಗೆ ರಕ್ಷಣೆ ನೀಡುವುದು ಅಕ್ಕ ಪಡೆಯ ಮೂಲ ಉದ್ದೇಶವಾಗಿದೆ.
ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸದೃಢರಾಗಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಅದರಂತೆ ಅಕ್ಕ ಪಡೆಯು ಕೂಡ ಮಹಿಳೆಯರ ಸುರಕ್ಷೆಗಾಗಿ ಸದಾ ಕಾಲ ಕಾರ್ಯನಿರ್ವಹಿಸುತ್ತದೆ.
ಅಕ್ಕ ಪಡೆ ಗಸ್ತು ವಾಹನಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಸಿರು ನಿಶಾನೆ ತೋರಿಸಿದರು. ಬಳಿಕ ಅಕ್ಕ ಪಡೆಯ ಸಿಬ್ಬಂದಿಗಳು ವಿವಿಧ ರಕ್ಷಣಾತ್ಮಕ ತಂತ್ರಗಳ ಅಣುಕುಗಳನ್ನು ಪ್ರದರ್ಶಿಸಿದರು.

