ಹಾಸನ: ಸ್ನೇಹಿತನನ್ನೇ ಕಿಡ್ನ್ಯಾಪ್ ಮಾಡಿದ ಗೆಳೆಯರ ಗ್ಯಾಂಗ್ ಆತನನ್ನು ಹತ್ಯೆಗೈದು, ಶವ್ವಾನ್ನು ಸುಟ್ಟು ಹಾಕಿರುವ ಘೋರ ಘಟನೆ ಹಾಸನ ಜಿಲ್ಲೆಯ ನಿಟ್ಟೂರು ಬಳಿ ಹಂಗರಹಳ್ಳಿಯ ತೋಟದ ಮನೆಯಲ್ಲಿ ನಡೆದಿದೆ.
ವರುಣ್(22) ಕೊಲೆಯಾದ ಯುವಕ. ಅರಸೀಕೆರೆ ತಾಲೂಕಿನ ಕಾಡಯ್ಯನಕೊಪ್ಪಲು ನಿವಾಸಿ. ಹಣಕಾಸು ವಿಚಾರದಲ್ಲಿ ಕರೆದೊಯ್ದು ಹಲ್ಲೆ ಮಾಡಲಾಗಿದೆ. ಶಶಾಂಕ್, ಸತೀಶ್, ಕಿರಣ್, ಅಭಿ, ಜೀವನ್, ಚೇತನ್, ಪೃಥ್ವಿಕ್, ಗಜ ಅಲಿಯಾಸ್ ಪ್ರಜ್ವಲ್ ವಿರುದ್ಧ ಕೊಲೆ ಆರೋಪದಡಿ ಮೊಕದ್ದಮೆ ದಾಖಲಾಗಿದೆ.
ಮಾರ್ಚ್ 10ರಿಂದ ವರುಣ್ ಕಾಣೆಯಾಗಿದ್ದಾನೆ. ಹಣಕಾಸು ವಿಚಾರದಲ್ಲಿ ವರುಣ್ ಹಾಅಗೂ ಲೋಹಿತ್ ನನ್ನು ಸ್ನೇಹಿತರ ಗ್ಯಾಂಗ್ ಅಪಹರಿಸಿದೆ. ಹಂಗರಹಳ್ಳಿಯ ತೋಟದ ಮನೆಯಲ್ಲಿ ಇಬ್ಬರನ್ನು ಕೂಡಿಹಾಕಿ ಹಲ್ಲೆ ನಡೆಸಿದೆ. ಹಲ್ಲೆಗೊಳಗಾಗಿದ್ದ ಲೋಹಿತ್ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದ. ವರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಂದಿದ್ದಾರೆ.
ನಂತರ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ವರುಣ್ ಶವವನ್ನು ಸಂಪೂರ್ಣ ಸುಟ್ಟು ಪರಾರಿಯಾಗಿದ್ದಾರೆ.
ಇತ್ತ ಮಾರ್ಚ್ 15ರಂದು ಪುತ್ರ ನಾಪತ್ತೆಯಾಗಿರುವ ಬಗ್ಗೆ ತಾಯಿ ಕಲಾವತಿ ಪೊಲೀಸರಿಗೆ ದೂರು ನೀಡಿದ್ದಾರೆ. ನಾಪತ್ತೆ ಕೇಸ್ ದಾಖಲಿಸಿಕೊಂಡು ಗಂಡಸಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಪೊಲೀಸರ ತನಿಖೆ ವೇಳೆ ವರುಣ್ ಕೊಲೆಯಾಗಿರುವ ವಿಚಾರ ಬಹಿರಂಗವಾಗಿದೆ.
ಸ್ನೇಹಿತರೇ ಅಪಹರಿಸಿ ಹಲ್ಲೆ ನಡೆಸಿ ಹತ್ಯೆಗೈದಿದ್ದ ಸ್ನೇಹಿತರ ವಿರುದ್ಧ ಮಾ.19ರಂದು ಹಾಸನ ತಾಲೂಕಿನ ದುದ್ದ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ವರುಣ್ ಅಪಹರಣ ಮತ್ತು ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.

