ದಾವಣಗೆರೆ: ಉಪಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ್ನು ಸಮರ್ಥ್ ಶಾಮನೂರು ಅವರಿಗೆ ನೀಡುತ್ತಿದ್ದಂತೆ ಅಲ್ಪಸಂಖ್ಯಾತರ ಅಸಮಾಧಾನ ಭುಗಿಲೆದ್ದಿದೆ. ಸ್ವಪಕ್ಷದ ವಿರುದ್ಧವೇ ಸಾದಿಕ್ ಪೈಲ್ವಾನ್ ಬಂಡಾಯ ಸಾರಿದ್ದಾರೆ.
ಏಪ್ರಿಲ್ 9 ರಂದು ನಡೆಯಲಿರುವ ರಾಜ್ಯದ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಇಂದು ಅಧಿಕೃತವಾಗಿ ಘೋಷಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಮರ್ಥ್ ಶಾಮನೂರು ಮತ್ತು ಬಾಗಲಕೋಟೆ ಕ್ಷೇತ್ರದಿಂದ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ದಾವಣಗೆರೆಯಲ್ಲಿ ಶಾಮನೂರು ಮೊಮ್ಮಗನಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರು ಸಿಡಿದೆದ್ದಿದ್ದಾರೆ.
ಟಿಕೆಟ್ ಕೈತಪ್ಪಿದ್ದಕ್ಕೆ ಸಾದಿಕ್ ಪೈಲ್ವಾನ್, ಸ್ವಪಕ್ಷದ ವಿರುದ್ಧವೇ ತೊಡೆತಟ್ಟಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ನಾಳೆ ನೂರಾರು ಬೆಂಬಲಿಗರ ಜೊತೆ ತೆರಳಿ ನಾಮಪತ್ರ ಸಲ್ಲಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.

