ದಿಸ್ಪುರ: ಅಸ್ಸಾಂನಲ್ಲಿ ನಿಷೇಧಿತ ಉಲ್ಫಾ (ಐ) ಸಂಘಟನೆ ಉಗ್ರರು ದಾಳಿ ನಡೆಸಿದ್ದು, ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ಅಸ್ಸಾಂ-ಅರುಣಾಚಲ ಗಡಿಯ ಬಳಿಯ ಜಗುನ್‌ನಲ್ಲಿರುವ ಪೊಲೀಸ್ ಕಮಾಂಡೋ ಶಿಬಿರದ ಮೇಲೆ ದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ಪೊಲೀಸ್ ಶಿಬಿರದ ಮೇಲೆ ಗ್ರೆನೇಡ್ ಮತ್ತು ಆರ್‌ಪಿಜಿ ಬಳಸಿ ದಾಳಿ ನಡೆಸಿದ್ದಾರೆ. ಉಗ್ರರತ್ತ ಅಸ್ಸಾಂ ಪೊಲೀಸ್ ಸಿಬ್ಬಂದಿ ಕೂಡ ಪ್ರತಿದಾಳಿ ನಡೆಸಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಗುಂಡಿನ ಕಾಳಗದಲ್ಲಿ ನಾಲ್ವರು ಅಸ್ಸಾಂ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಯ ಬೆನ್ನಲ್ಲೇ ಉಲ್ಫಾ (ಐ) ಬಣದ ಉಗ್ರರು ಕಾಡಿನತ್ತ ಪರಾರಿಯಾಗಿದ್ದಾರೆ.
ಗಾಯಾಳು ಪೊಲೀಸರನ್ನು ಚಿತ್ರಂಜನ್ ಮಿಲಿ, ಜೋರ್ಹತ್‌ನ ದೇಬಾಶಿಶ್ ಬೋರಾ, ಚಾಬುವಾದ ರಬಿ ಘರ್ ಮತ್ತು ಗೋಲ್‌ಪಾರಾದ ಜಂಬೂಷ್ ಮರಕ್ ಎಂದು ಗುರುತಿಸಲಾಗಿದೆ. ಇವರನ್ನು ದಿಬ್ರುಗಢದ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

