ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯೆಲ್ಲಿ ತಂತ್ರಜ್ಞಾನ ಆಧಾರಿತ ಬದಲಾವಣೆ ತರಲು ಸರ್ಕಾರ ಮುಂದಾಗಿದೆ.
ಮೃತರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಡಲು ಸರ್ಕಾರ ಮುಂದಾಗಿದ್ದು, ಯೋಜನೆ ಫಲಾನುಭವಿಗಳ ಬಯೋಮೆಟ್ರಿಕ್ ವಿವರಗಳನ್ನು ಒಂದು ಬಾರಿ ಖಾತರಿಪಡಿಸಿಕೊಳ್ಳಲು ಮುಂದಾಗಿದೆ. ಯೋಜನೆಯ ದುರ್ಬಳಕೆ ಮತ್ತು ಅನರ್ಹರಿಗೆ ಹಣ ಸಂದಾಯವಾಗುವುದನ್ನು ತಡೆಯಲು ಒನ್ ಟೈಮ್ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ಯೋಜನೆಯ ಪ್ರಯೋಜನ ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳು ತಮ್ಮ ಖಾತೆಯನ್ನು ಬಯೋಮೆಟ್ರಿಕ್ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಮರು ನೋಂದಣಿ ನವೀಕರಣ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ನವೀಕರಿಸದಿದ್ದರೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ. ಈ ಕುರಿತು ರಾಜ್ಯ ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ.
ಗೃಹಲಕ್ಷ್ಮಿ ಯೋಜನೆಯ ಲಕ್ಷಾಂತರ ಫಲಾನುಭವಿಗಳು ನಿಧನರಾಗಿದ್ದಾರೆ. ಸುಮಾರು ಎರಡು ಲಕ್ಷ ಮಂದಿ ಫಲಾನುಭವಿಗಳು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಹೀಗೆ ಮೃತಪಟ್ಟವರ ಖಾತೆಗೂ ಹಣ ಜಮೆಯಾಗುತ್ತಿದೆ. ಫಲಾನುಭವಿಗಳಿಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಚಿಂತನೆ ನಡೆದಿತ್ತು. ಆದರೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.
ಫಲಾನುಭವಿಗಳು ಸಮೀಪದ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಮೊಬೈಲ್ ಸಂಖ್ಯೆ ಬಯೋಮೆಟ್ರಿಕ್ ನೀಡುವ ಮೂಲಕ ಖಾತೆಯನ್ನು ಮರು ನೋಂದಣಿ ಮಾಡಿಸಿಕೊಳ್ಳಬೇಕು ಎನ್ನಲಾಗಿದೆ.

