ಮದ್ಯಪ್ರಿಯರಿಗೆ ಸಂತಸದ ಸುದ್ದಿ ಸಿಕ್ಕಿದೆ. ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ (FTA) ಜಾರಿಯಾದ ಹಿನ್ನೆಲೆಯಲ್ಲಿ ಸ್ಕಾಚ್ ವಿಸ್ಕಿ ಹಾಗೂ ಜಿನ್ ಮೇಲಿನ ಆಮದು ಸುಂಕವನ್ನು 150%ರಿಂದ 75%ಕ್ಕೆ ಇಳಿಸಲಾಗಿದ್ದು, ಇದರ ಪರಿಣಾಮವಾಗಿ ದೇಶದಲ್ಲಿ ಪ್ರೀಮಿಯಂ ಸ್ಕಾಚ್ ವಿಸ್ಕಿ ಬೆಲೆ 15ರಿಂದ 20 ಶೇಕಡಾವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ರಾಜ್ಯ ಸರ್ಕಾರಗಳ ಅಬಕಾರಿ ಸುಂಕ, ವ್ಯಾಟ್ ಹಾಗೂ ಇತರ ವೆಚ್ಚಗಳ ಕಾರಣ ಈ ಬೆಲೆ ಇಳಿಕೆಯ ಲಾಭ ತಕ್ಷಣವೇ ಸಂಪೂರ್ಣವಾಗಿ ಗ್ರಾಹಕರಿಗೆ ಸಿಗದಿರುವ ಸಾಧ್ಯತೆಯೂ ಇದೆ.
ಹೌದು. ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ (FTA) ಜಾರಿಯಾದ ಪರಿಣಾಮ ದೇಶದಲ್ಲಿ ಆಮದು ಮಾಡಿಕೊಳ್ಳುವ ಮದ್ಯದ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ. ಈ ಒಪ್ಪಂದದ ಭಾಗವಾಗಿ ಸ್ಕಾಚ್ ವಿಸ್ಕಿ ಹಾಗೂ ಜಿನ್ ಮೇಲಿನ ಆಮದು ಸುಂಕವನ್ನು 150%ರಿಂದ 75%ಕ್ಕೆ ಇಳಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ ಹಂತ ಹಂತವಾಗಿ ಇದನ್ನು 40%ಕ್ಕೆ ಇಳಿಸುವ ಯೋಜನೆಯೂ ಇದೆ.
ಈ ನಿರ್ಧಾರದಿಂದ ವಿದೇಶಿ ಮದ್ಯದ ಬೆಲೆಗಳು ಕಡಿಮೆಯಾಗುವ ಸಾಧ್ಯತೆ ಇದ್ದು, ವಿಶೇಷವಾಗಿ ಪ್ರೀಮಿಯಂ ಸ್ಕಾಚ್ ವಿಸ್ಕಿಯ ಬೆಲೆ 15–20%ರವರೆಗೆ ಇಳಿಯಬಹುದು ಎಂದು ಉದ್ಯಮ ವಲಯಗಳು ಅಂದಾಜಿಸಿವೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿದ್ದು, ದೇಶೀಯ ಪ್ರೀಮಿಯಂ ವಿಸ್ಕಿ ಮಾರುಕಟ್ಟೆಯಲ್ಲಿ ಸ್ಪರ್ಧೆಯೂ ಹೆಚ್ಚುವ ನಿರೀಕ್ಷೆಯಿದೆ.
ಆದರೆ ಮದ್ಯದ ಬಾಟಲಿಯ ಅಂತಿಮ ಬೆಲೆಯನ್ನು ನಿರ್ಧರಿಸುವಲ್ಲಿ ರಾಜ್ಯ ಸರ್ಕಾರಗಳ ಅಬಕಾರಿ ಸುಂಕ, ವ್ಯಾಟ್ (VAT), ಸಾರಿಗೆ ವೆಚ್ಚ ಹಾಗೂ ವಿತರಕರ ಮಾರ್ಜಿನ್ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಆಮದು ಸುಂಕ ಕಡಿಮೆಯಾದ ಲಾಭವು ತಕ್ಷಣವೇ ಸಂಪೂರ್ಣವಾಗಿ ಗ್ರಾಹಕರಿಗೆ ತಲುಪದೇ ಇರಬಹುದು.
ಭಾರತವು ವಿಶ್ವದಲ್ಲೇ ಅತಿದೊಡ್ಡ ವಿಸ್ಕಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಈ ಒಪ್ಪಂದದಿಂದ ಪ್ರೀಮಿಯಂ ಮದ್ಯದ ಬಳಕೆ ಹೆಚ್ಚಾಗುವ ಸಾಧ್ಯತೆಯಿದ್ದು, ಭಾರತೀಯ ಮದ್ಯ ಉತ್ಪಾದನಾ ಕಂಪನಿಗಳು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಸ್ಕಾಚ್ ಆಮದು ಮಾಡಿಕೊಂಡು ವಿಸ್ಕಿ ತಯಾರಿಸುವ ಭಾರತೀಯ ಕಂಪನಿಗಳಿಗೂ ಈ ಬದಲಾವಣೆಗಳಿಂದ ಲಾಭವಾಗುವ ಸಾಧ್ಯತೆ ಇದೆ.

