HomeLatest NewsE20 ಇಂಧನದಿಂದ ಮೈಲೇಜ್ 2-6% ಇಳಿಕೆಯಾಗಬಹುದು; ಆದರೆ ಪ್ರಯೋಜನಗಳೇ ಹೆಚ್ಚು' : ನಿತಿನ್ ಗಡ್ಕರಿ ಸ್ಪಷ್ಟನೆ

E20 ಇಂಧನದಿಂದ ಮೈಲೇಜ್ 2-6% ಇಳಿಕೆಯಾಗಬಹುದು; ಆದರೆ ಪ್ರಯೋಜನಗಳೇ ಹೆಚ್ಚು’ : ನಿತಿನ್ ಗಡ್ಕರಿ ಸ್ಪಷ್ಟನೆ

ದೇಶದಲ್ಲಿ 20 ಶೇಕಡಾ ಎಥನಾಲ್‌ ಮಿಶ್ರಿತ E20 ಪೆಟ್ರೋಲ್ ಬಳಕೆಯ ಕುರಿತು ವಾಹನ ಸವಾರರಲ್ಲಿ ವ್ಯಕ್ತವಾಗುತ್ತಿರುವ ಅನುಮಾನಗಳು ಮತ್ತು ಟೀಕೆಗಳಿಗೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿದೆ.ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡುತ್ತಾ, E20 ಪೆಟ್ರೋಲ್ ಬಳಕೆಯಿಂದ ವಾಹನದ ಮಾದರಿ ಹಾಗೂ ಅದರ ವಯಸ್ಸಿನ ಆಧಾರದ ಮೇಲೆ ಮೈಲೇಜ್ 2ರಿಂದ 6 ಶೇಕಡಾವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಆದರೆ, ಮೈಲೇಜ್‌ನಲ್ಲಿ ಸ್ವಲ್ಪ ಇಳಿಕೆಯಾಗಬಹುದು ಹೊರತು, ಎಂಜಿನ್‌ನ ಬಾಳಿಕೆ ಅಥವಾ ಕಾರ್ಯಕ್ಷಮತೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. E20 ಬಳಕೆಯಿಂದ ಎಂಜಿನ್ ವೈಫಲ್ಯ ಕಂಡುಬಂದಿರುವ ಯಾವುದೇ ದಾಖಲೆಗಳಿಲ್ಲ ಎಂದೂ ತಿಳಿಸಿದ್ದಾರೆ.

E20 ಇಂಧನದ ಪ್ರಮುಖ ಲಾಭಗಳು

ಸಂಸತ್ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಎಥನಾಲ್ ಮಿಶ್ರಿತ ಇಂಧನ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. E10 ಪೆಟ್ರೋಲ್‌ಗೆ ಹೋಲಿಸಿದರೆ E20 ಬಳಕೆಯಿಂದ ವಾಹನದ ಪಿಕಪ್ (ವೇಗವರ್ಧನೆ) ಉತ್ತಮವಾಗಿದ್ದು, ಚಾಲನೆ ಹೆಚ್ಚು ಸುಗಮವಾಗಿರುತ್ತದೆ ಎಂದು ತಿಳಿಸಿದ್ದಾರೆ. ಜೊತೆಗೆ, ಕಾರ್ಬನ್ ಹೊರಸೂಸುವಿಕೆ ಸುಮಾರು 30 ಶೇಕಡಾವರೆಗೆ ಕಡಿಮೆಯಾಗುತ್ತದೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

BS-III, BS-IV ಹಾಗೂ BS-VI ವರ್ಗದ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಮೇಲೆ E20 ಇಂಧನದ ಪರಿಣಾಮವನ್ನು ಅಧ್ಯಯನ ಮಾಡಲು ARAI, SIAM ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಸಂಸ್ಥೆಗಳು ಜಂಟಿಯಾಗಿ ಸಮಗ್ರ ಅಧ್ಯಯನ ನಡೆಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಾಹನ ಸವಾರರ ಆತಂಕ – ಪ್ರತಿಪಕ್ಷಗಳ ಟೀಕೆ

ಸಾಮಾನ್ಯ ಪೆಟ್ರೋಲ್‌ಗೆ 20 ಶೇಕಡಾ ಎಥನಾಲ್‌ ಮಿಶ್ರಣ ಮಾಡಿ ಮಾರಾಟವಾಗುತ್ತಿರುವ E20 ಇಂಧನ ಈಗ ದೇಶಾದ್ಯಂತ ಲಭ್ಯವಿದೆ. ಆದರೆ, ಹಳೆಯ ವಾಹನಗಳಲ್ಲಿ E20 ಬಳಕೆಯಿಂದ ಎಂಜಿನ್ ಮತ್ತು ಇಂಧನ ವ್ಯವಸ್ಥೆಗೆ ಹಾನಿಯಾಗಬಹುದು, ನಿರ್ವಹಣಾ ವೆಚ್ಚ ಹೆಚ್ಚಾಗಬಹುದು ಎಂಬ ಆತಂಕವನ್ನು ಕೆಲ ವಾಹನ ಸವಾರರು, ಗ್ರಾಹಕ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ವ್ಯಕ್ತಪಡಿಸುತ್ತಿವೆ.

ಒಂದು ವೇಳೆ ಎಂಜಿನ್ ಹಾನಿಯಾದರೆ ಅದರ ಹೊಣೆ ಯಾರು ಎಂಬ ಪ್ರಶ್ನೆಯನ್ನೂ ಹಲವರು ಎತ್ತಿದ್ದಾರೆ.

‘ಕೋಟ್ಯಂತರ ವಾಹನಗಳಲ್ಲಿ ಪರೀಕ್ಷೆ – ಯಾವುದೇ ಅಪಾಯವಿಲ್ಲ’

ಈ ಆರೋಪಗಳನ್ನು ತಳ್ಳಿಹಾಕಿರುವ ನಿತಿನ್ ಗಡ್ಕರಿ, ನೀತಿ ಆಯೋಗ, ವಾಹನ ತಯಾರಕರು, ತೈಲ ಕಂಪನಿಗಳು ಹಾಗೂ ತಾಂತ್ರಿಕ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ವೈಜ್ಞಾನಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.ಪ್ರಸ್ತುತ ದೇಶದಲ್ಲಿ 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು 3 ಕೋಟಿಗೂ ಹೆಚ್ಚು ಪೆಟ್ರೋಲ್ ಕಾರುಗಳು ಎಥನಾಲ್ ಮಿಶ್ರಿತ ಇಂಧನ ಬಳಸುತ್ತಿವೆ. ಆದರೂ ಎಂಜಿನ್ ವೈಫಲ್ಯ ಸಂಭವಿಸಿರುವ ಯಾವುದೇ ದೃಢೀಕೃತ ದಾಖಲೆಗಳಿಲ್ಲ ಎಂದು ಅವರು ಹೇಳಿದ್ದಾರೆ.

ವಾಹನ ಬಿಡಿಭಾಗಗಳಲ್ಲಿ ಅಸಹಜ ಸವೆತ ಅಥವಾ ತುಕ್ಕು ಉಂಟಾಗಿಲ್ಲ ಎಂಬುದನ್ನು ವಾಹನ ತಯಾರಕರ ಸರ್ವಿಸ್ ಡೇಟಾ ದೃಢೀಕರಿಸಿದೆ. E20 ಬಳಕೆ ಮಾಡುವ ವಾಹನಗಳಿಗೂ ತಯಾರಕರು ಎಂದಿನಂತೆ ವಾರಂಟಿ ಸೇವೆಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಸುಳ್ಳು ಪ್ರಚಾರಕ್ಕೆ ಕೇಂದ್ರದ ತಿರುಗೇಟು

ಇನ್ನೊಂದೆಡೆ, E20 ಇಂಧನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಳ್ಳಿಹಾಕಿದೆ.ಕೋಟ್ಯಂತರ ವಾಹನಗಳಲ್ಲಿ ಹಲವು ವರ್ಷಗಳಿಂದ ಈ ಇಂಧನ ಬಳಸಲಾಗುತ್ತಿದ್ದು, E20 ಬಳಕೆಯಿಂದ ಎಂಜಿನ್ ಹಾಳಾಗುತ್ತದೆ ಎಂಬುದು ಸಂಪೂರ್ಣ ಸುಳ್ಳು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.ಹಳೆಯ ವಾಹನಗಳಲ್ಲಿ ಮೈಲೇಜ್ ಕುರಿತು ಪ್ರತಿಕ್ರಿಯಿಸಿದ ಸಚಿವಾಲಯ, E10 ಇಂಧನಕ್ಕಾಗಿ ವಿನ್ಯಾಸಗೊಳಿಸಿದ ಕೆಲವು ಹಳೆಯ ವಾಹನಗಳಲ್ಲಿ ಮೈಲೇಜ್ ಕೇವಲ 3ರಿಂದ 5 ಶೇಕಡಾವರೆಗೆ ಮಾತ್ರ ಕಡಿಮೆಯಾಗಬಹುದು ಎಂದು ತಿಳಿಸಿದೆ.

ಇದಲ್ಲದೆ, ವಾಹನದ ಮೈಲೇಜ್ ಎಂಬುದು ಚಾಲನೆ ಮಾಡುವ ವಿಧಾನ, ಟೈರ್‌ಗಳ ಗಾಳಿಯ ಒತ್ತಡ, ಸಂಚಾರ ದಟ್ಟಣೆ ಹಾಗೂ ವಾಹನದ ಸಕಾಲಿಕ ಸರ್ವಿಸಿಂಗ್ ಮುಂತಾದ ಅಂಶಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿರುತ್ತದೆ ಎಂದು ತಿಳಿಸಿದೆ.ಅಲ್ಲದೆ, E20 ಇಂಧನದಿಂದ ಆಕ್ಟೇನ್ ರೇಟಿಂಗ್ ಹೆಚ್ಚಾಗುವುದರಿಂದ ಇಂಧನ ಹೆಚ್ಚು ಸ್ವಚ್ಛವಾಗಿ ದಹನಗೊಳ್ಳುತ್ತದೆ. ಇದರಿಂದ ಎಂಜಿನ್ ಕಾರ್ಯಕ್ಷಮತೆ ಇನ್ನಷ್ಟು ಸುಗಮವಾಗುತ್ತದೆ ಎಂದು ಪೆಟ್ರೋಲಿಯಂ ಸಚಿವಾಲಯ ವಿವರಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular