ವಿಜಯಪುರ : ಇನ್ಮುಂದೆ ವಿಜಯಪುರದ ಜನರು ವಿಮಾನದಲ್ಲಿ ಪ್ರಯಾಣಿಸಲು ಬೆಂಗಳೂರು ಅಥವಾ ಬೇರೆ ನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ದೂರವಾಗುವ ಕಾಲ ಹತ್ತಿರ ಬಂದಿದೆ. ಜಿಲ್ಲೆಯ ಜನರು ಹಲವು ವರ್ಷಗಳಿಂದ ಕಾಯುತ್ತಿದ್ದ ವಿಮಾನಯಾನ ಸೇವೆ ಆರಂಭಕ್ಕೆ ಕೊನೆಗೂ ಕಾಲ ಕೂಡಿಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಡಿಸೆಂಬರ್ ಅಂತ್ಯದ ವೇಳೆಗೆ ವಿಜಯಪುರ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಆರಂಭವಾಗುವ ನಿರೀಕ್ಷೆಯಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣವು 2024ರ ಅಂತ್ಯದ ವೇಳೆಗೆ ಭೌತಿಕವಾಗಿ ಪೂರ್ಣಗೊಂಡಿದ್ದರೂ, ಪರಿಸರ ಇಲಾಖೆಯ ಅನುಮತಿ ಹಾಗೂ ಇತರ ಕಾನೂನು ಪ್ರಕ್ರಿಯೆಗಳ ಕಾರಣದಿಂದ ವಿಮಾನ ಹಾರಾಟ ಆರಂಭವಾಗುವುದು ವಿಳಂಬವಾಗಿತ್ತು. ಇದೀಗ ಸುಪ್ರೀಂ ಕೋರ್ಟ್ನ ತಡೆಯಾಜ್ಞೆ ತೆರವಾಗಿದ್ದು, ವಿಮಾನಯಾನ ಆರಂಭಕ್ಕೆ ಇದ್ದ ಪ್ರಮುಖ ಅಡೆತಡೆ ನಿವಾರಣೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 2026ರ ಅಕ್ಟೋಬರ್ 7ರಂದು ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯಲು ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ (DGCA) ಅಗತ್ಯ ಪರವಾನಗಿ ಪಡೆದುಕೊಳ್ಳಲು ಪ್ರಗತಿ ಪೋರ್ಟಲ್ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
13 ತಾಲೂಕುಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ
ಇದೇ ವೇಳೆ ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಎರಡು ಹಂತಗಳಲ್ಲಿ ಶಾಶ್ವತ ಕುಡಿಯುವ ನೀರಿನ ಸಮಗ್ರ ಯೋಜನೆ ಜಾರಿಗೊಳಿಸಲಾಗುತ್ತಿದೆ.ಜಿಲ್ಲೆಯ 13 ತಾಲೂಕುಗಳ 211 ಗ್ರಾಮ ಪಂಚಾಯಿತಿಗಳು ಹಾಗೂ 11 ನಗರ ಪ್ರದೇಶಗಳಿಗೆ ನೀರು ಪೂರೈಸುವ ಯೋಜನೆ.ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ಹಿನ್ನೀರನ್ನು ಶುದ್ಧೀಕರಿಸಿ ಪೂರೈಸಲು ₹3,059 ಕೋಟಿ ಅನುದಾನ ನಿಗದಿಯಾಗಿದೆ. ಈಗಾಗಲೇ ₹2,095 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
81 ಸಾವಿರ ಉದ್ಯೋಗ ಸೃಷ್ಟಿ
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಡಿ 2025ರ ನವೆಂಬರ್ನಿಂದ 2026ರ ನವೆಂಬರ್ವರೆಗೆ ಒಟ್ಟು 6,713 ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME) ಆನ್ಲೈನ್ ಮೂಲಕ ಉದ್ಯಮ ನೋಂದಣಿ ಪ್ರಮಾಣಪತ್ರ ಪಡೆದಿವೆ. ಈ ಕೈಗಾರಿಕೆಗಳ ಮೂಲಕ ₹32.43 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, 81 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಎಂ.ಬಿ. ಪಾಟೀಲ್ ಮಾಹಿತಿ ನೀಡಿದ್ದಾರೆ.
ರಿಲಯನ್ಸ್ ಕಂಪನಿಯಿಂದ ₹1,622 ಕೋಟಿ ಹೂಡಿಕೆ
ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ವತಿಯಿಂದ ₹1,622 ಕೋಟಿ ವೆಚ್ಚದಲ್ಲಿ ಪ್ಯಾಕೇಜ್ಡ್ ಕಾರ್ಬೊನೇಟೆಡ್ ಸಾಫ್ಟ್ ಡ್ರಿಂಕ್ಸ್ ಮತ್ತು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಅನುಮೋದನೆ ದೊರೆತಿದೆ.
ನವೆಂಬರ್ 16ರಂದು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಇದರಿಂದ ಸುಮಾರು 1,200 ಜನರಿಗೆ ಉದ್ಯೋಗಾವಕಾಶ ಸಿಗುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದಾರೆ.
ಡಿಸೆಂಬರ್ 13ರಂದು ಗ್ರೀನ್ ಮ್ಯಾರಥಾನ್
2026-27ನೇ ಸಾಲಿನ ವೃಕ್ಷೋತ್ಥಾನ ಮ್ಯಾರಥಾನ್ ಕಾರ್ಯಕ್ರಮವನ್ನು ಡಿಸೆಂಬರ್ 13ರಂದು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ದೇಶದ ಪ್ರಮುಖ ಗ್ರೀನ್ ಮ್ಯಾರಥಾನ್ಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

