ನಟಿ ಹಾಗೂ ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಧರ್ಮದ ಕಾರಣಕ್ಕಾಗಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಕಾಶ್ಮೀರಿ ಉದ್ಯಮಿಯ ಜೊತೆ ವಿವಾಹವಾಗಿರುವ ಊರ್ಮಿಳಾ ಮಾತೋಂಡ್ಕರ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ವಿಕಿಪೀಡಿಯಾ ಕಳೆದ ವರ್ಷ ಮಾಹಿತಿ ನೀಡಿತ್ತು. ಅಲ್ಲದೇ ಆಕೆ ತನ್ನ ಹೆಸರನ್ನ ಮರಿಯಂ ಅಖ್ತರ್ ಮಿರ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂದೂ ಹೇಳಲಾಗಿತ್ತು.
ಕಾಶ್ಮೀರಿ ಮುಸ್ಲಿಂ ಕುಟುಂಬಕ್ಕೆ ಸೊಸೆಯಾಗಿ ಹೋದ ಊರ್ಮಿಳಾ ಬಗ್ಗೆ ಸಾಕಷ್ಟು ಟ್ರೋಲ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ ತನ್ನ ಹಾಗೂ ತನ್ನ ಪತಿಯ ಬಗೆಗಿನ ನಿರಂತರ ಟ್ರೋಲ್ನಿಂದ ಕೋಪಗೊಂಡಿರುವ ನಟಿ ಇದೀಗ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ನನ್ನ ಪತಿಯನ್ನ ಭಯೋತ್ಪಾದಕ, ಪಾಕಿಸ್ತಾನಿ ಎಂದೆಲ್ಲ ಕರೆಯಲಾಗುತ್ತಿದೆ. ಎಲ್ಲದಕ್ಕೂ ಒಂದು ಮಿತಿ ಅನ್ನೋದು ಇದ್ದೇ ಇದೆ. ದುಷ್ಕರ್ಮಿಗಳು ನನ್ನ ಬಗ್ಗೆ ವಿಕಿಪೀಡಿಯಾದಲ್ಲೂ ತಪ್ಪು ಮಾಹಿತಿಯನ್ನ ಹಾಕಿದ್ದಾರೆ. ನನ್ನ ತಾಯಿಯ ಹೆಸರನ್ನ ರುಖ್ಸಾನಾ ಅಹ್ಮದ್ ಹಾಗೂ ತಂದೆಯ ಹೆಸರನ್ನ ಶಿವಿಂದರ್ ಸಿಂಗ್ ಎಂದು ಬರೆದಿದ್ದಾರೆ. ಈ ಹೆಸರಿನವರು ಭಾರತದಲ್ಲೇ ಇದ್ದಿರಬಹುದು. ಆದರೆ ಅವರ ಪರಿಚಯ ನನಗಿಲ್ಲ. ನಾನು ಶ್ರೀಕಾಂತ್ ಮಾತೋಂಡ್ಕರ್ ಹಾಗೂ ಸುನೀತಾ ಮಾತೋಂಡ್ಕರ್ ಪುತ್ರಿ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಪತಿ ಮುಸ್ಲಿಂ ಮಾತ್ರವಲ್ಲ ಅವರು ಕಾಶ್ಮೀರಿ ಮುಸ್ಲೀಂ. ನಾವಿಬ್ಬರೂ ಧರ್ಮವನ್ನ ಸಮಾನವಾಗಿ ಗೌರವಿಸುತ್ತೇವೆ ಎಂದು ಕಿಡಿಕಾರಿದ್ದಾರೆ.