ಬಿಜೆಪಿ ಹಾಗೂ ಆರ್ಎಸ್ಎಸ್ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಥಳುಕು ಹಾಕಿಕೊಂಡಿದೆ.
ಬಂಧಿತ ಯುವರಾಜನ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೆ ವರ್ಗಾವಣೆಯಾಗಿರುವ 1.25 ಕೋಟಿ ರೂಪಾಯಿ ಸಂಬಂಧ ಸ್ವತಃ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಈ ವಿಚಾರವಾಗಿ ಮಾತನಾಡಿದ ನಟಿ ರಾಧಿಕಾ ಕುಮಾರಸ್ವಾಮಿ ನಮ್ಮ ಕುಟುಂಬಕ್ಕೂ ಸ್ವಾಮಿಗೂ 17 ವರ್ಷದಿಂದ ಪರಿಚಯವಿದೆ. ನನ್ನ ತಂದೆಯ ಮರಣದ ವಿಚಾರದಲ್ಲಿ ಅವರು ನುಡಿದಿದ್ದ ಭವಿಷ್ಯವಾಣಿ ನಿಜವಾಗಿತ್ತು. ಇದಾದ ಬಳಿಕ ನಮ್ಮ ಕುಟುಂಬಕ್ಕೆ ಅವರು ಇನ್ನಷ್ಟು ಹತ್ತಿರವಾಗಿದ್ದರು.
ಸ್ವಾಮಿ ಪತ್ನಿಯ ಹೆಸರಲ್ಲಿ ಪ್ರಾಡಕ್ಷನ್ ಹೌಸ್ ಇದೆ. ಅವರು ಸಿನಿಮಾ ನಿರ್ಮಾಣ ಮಾಡುವ ಕನಸನ್ನ ಹೊಂದಿದ್ದರು. ಹೀಗಾಗಿ ನನ್ನ ಖಾತೆಗೆ 15 ಲಕ್ಷ ರೂಪಾಯಿ ಅಡ್ವಾನ್ಸ್ ರೂಪದಲ್ಲಿ ವರ್ಗಾವಣೆ ಮಾಡಿದ್ದಾರೆ. ನನ್ನ ಸಹೋದರನ ಖಾತೆಗೆ ಹಣ ವರ್ಗಾವಣೆ ಆಗಿದೆ ಅನ್ನೋದು ಕೇವಲ ವದಂತಿ ಎಂದು ಹೇಳಿದ್ದಾರೆ.