ಕರ್ನಾಟಕ ಸರ್ಕಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ವರ್ಗಾವಣೆ ಮಾಡಲಾಗಿದ್ದು, ಯಾವುದೇ ಹುದ್ದೆಯನ್ನು ಇನ್ನೂ ಸಹ ನೀಡಲಾಗಿಲ್ಲ.
ಮಂಗಳವಾರ ಈ ಕುರಿತು ಪ್ರಸನ್ನ ಕುಮಾರ್ ವಿ., ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ.
ಧಾರವಾಡದ ನೂತನ ಜಿಲ್ಲಾಧಿಕಾರಿಯಾಗಿ ಸ್ನೇಹಲ್ ಆರ್. (ಕೆಎನ್: 2013) ನೇಮಕ ಮಾಡಲಾಗಿದೆ. ಆದರೆ ದಿವ್ಯ ಪ್ರಭು ಅವರಿಗೆ ಸದ್ಯಕ್ಕೆ ಯಾವುದೇ ಹುದ್ದೆಯನ್ನು ನೀಡಲಾಗಿಲ್ಲ.
ಐಎಎಸ್ ಅಧಿಕಾರಿ ಸ್ನೇಹಲ್ ಆರ್. ರಾಷ್ಟ್ರೀಯ ಜಾನುವಾರು ಮಿಷನ್ (ಎನ್ಎಲ್ಎಂ) ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದರು. ತಕ್ಷಣದಿಂದ ಮುತ್ತು ಮುಂದಿನ ಆದೇಶದ ತನಕ ಅವರನ್ನು ಧಾರವಾಡ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ದಿವ್ಯ ಪ್ರಭು 2014ನೇ ಬ್ಯಾಚ್ ಐಎಎಸ್ ಅಧಿಕಾರಿ ಅಕ್ಟೋಬರ್ 22, 2022ರಂದು ಅವರು ಧಾರವಾಡ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿದ್ದರು. ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿಯೂ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ.
ದಿವ್ಯ ಪ್ರಭು ಅವರಿಗಿಂತ ಮೊದಲು ಕವಿತಾ ಎಸ್.ಮನ್ನಿಕೇರಿ ಧಾರವಾಡ ಜಿಲ್ಲಾಧಿಕಾರಿಯಾಗಿದ್ದರು. ಬಳಿಕ 2014 ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ದಿವ್ಯ ಪ್ರಭು ಡಿಸಿ ಆಗಿ ಬಂದರು. ಈಗ ಸ್ನೇಹಲ್ ಆರ್. ಅವರ ಮೂಲಕ ಧಾರವಾಡದ ಆಡಳಿತ ಮತ್ತೆ ಮಹಿಳೆಯ ಕೈ ಸೇರಿದೆ.
ದಿವ್ಯ ಪ್ರಭು ಅವರು ಈ ಮೊದಲು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.

