ಬೆಂಗಳೂರು: ಕೆನಡಾ ಮಹಿಳೆಯೊಬ್ಬರಿಗೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನ ಸ್ಪಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ದೂರು ನೀಡಿದರೂ ಹೋಟೆಲ್ ಆಡಳಿತ ಮಂಡಳಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.
ಕೆನಡಾದ ಮಹಿಳೆಯ ಜೊತೆ ಹೋಟೆಲ್ ಸ್ಪಾ ಸಿಬ್ಬಂದಿ ಮಸಾಜ್ ಸಮಯದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ಥೆರಪಿಸ್ಟ್ ಅಸಮಂಜಸವಾಗಿ ವರ್ತಿಸಿದ್ದಾನೆ. ತಾನು ಅರೆನಗ್ನ ಸ್ಥಿತಿಯಲ್ಲಿದ್ದಾಗಲೇ ಕೊಠಡಿಯ ಬಾಗಿಲು ತೆರೆದಿದ್ದರಿಂದ ತೀವ್ರ ಅವಮಾನ ಮತ್ತು ಮಾನಸಿಕ ಹಿಂಸೆ ಅನುಭವಿಸಬೇಕಾಯಿತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ಬಗ್ಗೆ ತಕ್ಷಣವೇ ಮಹಿಳೆ ಹೋಟೆಲ್ ಆಡಳಿತದ ಗಮನಕ್ಕೆ ತಂದಿದ್ದಾರೆ. ಆದರೆ ಅವರ ದೂರನ್ನು ಹೋಟೆಲ್ ಗಂಭೀರವಾಗಿ ಪರಿಗಣಿಸಿಲ್ಲವಂತೆ. ಬದಲಾಗಿ 7000 ರೂಪಾಯಿ ಮಸಾಜ್ ಶುಲ್ಕದ ಹಣವನ್ನ ಮರುಪಾವತಿ ಮಾಡಿ, ವಿಷಯವನ್ನು ಮುಂದುವರಿಸದಂತೆ ಸಲಹೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದರಿಂದ ನೊಂದ ಮಹಿಳೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಥೆರಪಿಸ್ಟ್ ಮತ್ತು ಇತರ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಧಿಕೃತ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

