ದೀಪಾವಳಿ ಹಬ್ಬವೆಂದರೆ ಕೇವಲ ಬೆಳಕಿನ ಹಬ್ಬ ಮಾತ್ರವಲ್ಲ, ಬದಲಿಗೆ ಕುಟುಂಬದವರೊಂದಿಗೆ ಸಮಯ ಕಳೆಯುವುದು, ಪ್ರೀತಿ ಹಂಚಿಕೊಳ್ಳುವುದು ಮತ್ತು ಸಂಪ್ರದಾಯಗಳನ್ನು ಮುಂದುವರಿಸುವುದು ಎಂದು ಬಾಲಿವುಡ್ ನಟಿ ಇಶಿತಾ ದತ್ತ ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಹಬ್ಬದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಮನೆಯಲ್ಲಿ ದೀಪಗಳನ್ನು ಬೆಳಗುವುದು, ಸುಂದರವಾದ ರಂಗೋಲಿ ಬಿಡುವುದು, ಹೂವುಗಳಿಂದ ಅಲಂಕಾರ ಮಾಡುವುದು ಮತ್ತು ವಿಶೇಷ ಪೂಜೆ ಸಲ್ಲಿಸುವುದು ತಮ್ಮ ಕುಟುಂಬದ ಹಬ್ಬದ ಪ್ರಮುಖ ಆಚರಣೆಗಳಾಗಿವೆ ಎಂದು ಇಶಿತಾ ಹೇಳಿದ್ದಾರೆ. ಸಂಜೆ ವೇಳೆ ಆಪ್ತರ ಮನೆಗಳಿಗೆ ಭೇಟಿ ನೀಡುವುದು ಹಾಗೂ ರಾತ್ರಿ ವೇಳೆ ಕುಟುಂಬದೊಂದಿಗೆ ಕಾಳಿಬಾರಿಗೆ ತೆರಳಿ ಕಾಳಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸುವುದು ತಮ್ಮ ದೀಪಾವಳಿಯ ವಿಶೇಷ ದಿನಚರಿ ಎಂದು ಅವರು ವಿವರಿಸಿದ್ದಾರೆ.
ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡಿರುವ ಇಶಿತಾ, ಜಮ್‌ಶೆಡ್‌ಪುರದಲ್ಲಿದ್ದಾಗ ತಂದೆಯೊಂದಿಗೆ ಸೇರಿ ಮನೆಗೆ ದೀಪದ ಅಲಂಕಾರ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈಗ ಅದೇ ಸಂಪ್ರದಾಯವನ್ನು ತಮ್ಮ ಮಕ್ಕಳೊಂದಿಗೆ ಮುಂದುವರಿಸುತ್ತಿರುವುದಾಗಿ ತಿಳಿಸಿದ್ದಾರೆ. ತಾಯಿ ಮಾಡುವ ನಾರಿಯಲ್ ಲಾಡು ತಮ್ಮ ಅಚ್ಚುಮೆಚ್ಚಿನ ಸಿಹಿಯಾಗಿದ್ದು, ತಂದೆಯೊಂದಿಗೆ ಸೇi ಲಾಡುಗಳಿಗೆ ಆಕಾರ ನೀಡುವುದು ಮತ್ತು ಮಕ್ಕಳು ಕಾತುರದಿಂದ ಕಾಯುವುದು ಮಧುರ ಅನುಭವ ಎಂದು ಅವರು ಹಂಚಿಕೊಂಡಿದ್ದಾರೆ.
ಪರಿಸರ ಜಾಗೃತಿಯ ಬಗ್ಗೆ ಮಾತನಾಡಿರುವ ನಟಿ, ಕಳೆದ ಹದಿನೈದರಿಂದ ಇಪ್ಪತ್ತು ವರ್ಷಗಳಿಂದ ತಾವು ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿರುವುದಾಗಿ ತಿಳಿಸಿದ್ದಾರೆ. ಅತಿ ಹೆಚ್ಚು ವಾಯು ಹಾಗೂ ಶಬ್ದ ಮಾಲಿನ್ಯ ಉಂಟಾಗುವುದರಿಂದ ಸಾರ್ವಜನಿಕರು ಪಟಾಕಿ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

