ಕಲಬುರಗಿ: ದೀಪಾವಳಿ ಸಡಗರ-ಸಂಭ್ರಮಾಚರಣೆ ನಡುವೆ ಪಟಾಕಿ ಸಿಡಿಸುವಾಗ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಮಧ್ಯೆ ಪಟಾಕಿ ಎಂದು ಭಾವಿಸಿ ಸಿಡಿಮದ್ದಿಗೆ ಬೆಂಕಿ ಹಚ್ಚಿದ ಬಾಲಕನೊಬ್ಬ ಭೀಕರ ಸ್ಥೋಟದಲ್ಲಿ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ದೀಪಾವಳಿ ಹಬ್ಬದ ದಿನವೇ ಘೋರ ದುರಂತ ಸಂಭವಿಸಿದೆ. ದೀಪಾವಳಿ ಪಟಾಕಿ ಎಂದು ಕಾಡುಹಂದಿಗಳಿಗಾಗಿ ತಂದಿಟ್ಟಿದ್ದ ಸ್ಫೋಟಕ ಸಿಡಿಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಭೀಮರಾಯ ಮೃತ ಬಾಲಕ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದ ಬಾಲಕ ಭೀಮರಾಯ, ದೀಪಾವಳಿ ಪಟಾಕಿ ಅಂತ ಮನೆಯಲ್ಲಿ ಇಟ್ಟಿದ್ದ ಮದ್ದಿಗೆ ಬೆಂಕಿ ಹಚ್ಚಿದ್ದಾನೆ. ಆದರೆ ಅದು ಸಾಮಾನ್ಯ ಪಟಾಕಿಯಾಗಿರಲಿಲ್ಲ. ಕಾಡುಹಂದಿಗಳನ್ನ ಓಡಿಸಲು ತಂದಿಟ್ಟಿದ್ದ ಸ್ಫೋಟಕವಾಗಿತ್ತು. ಆ ಮದ್ದಿನ ಅಪಾಯ ಅರಿಯದ ಭೀಮರಾಯ, ಬೆಂಕಿ ಹಚ್ಚಿದ ಕ್ಷಣವೇ ದೊಡ್ಡ ಸ್ಫೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಬಾಲಕನ ತಲೆ ಛಿದ್ರಛಿದ್ರವಾಗಿದೆ. ಸ್ಥಳದಲ್ಲೇ ಭೀಮರಾಯ ಸಾವನ್ನಪ್ಪಿದ್ದಾನೆ. ಕೆಲವೇ ಕ್ಷಣಗಳ ಹಿಂದೆ ಆಟವಾಡುತ್ತಿದ್ದ ಮಗ ಕಣ್ಣೆದುರೇ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಭೀಮರಾಯನ ತಂದೆ ಕಾಡುಹಂದಿಗಳನ್ನ ಓಡಿಸಲು ಸ್ಫೋಟಕ ಮದ್ದನ್ನ ಮನೆಯಲ್ಲಿ ತಂದಿಟ್ಟಿದ್ದರಂತೆ. ಅದನ್ನೇ ದೀಪಾವಳಿ ಪಟಾಕಿ ಅಂತ ಬಾಲಕ ಭಾವಿಸಿದ್ದಾನೆ. ಅಪಾಯಕಾರಿ ಮದ್ದು ಮನೆಯಲ್ಲಿ ಇಟ್ಟಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಮಕ್ಕಳ ಕೈಗೆ ಇಂಥ ಸ್ಫೋಟಕ ವಸ್ತುಗಳು ಸಿಕ್ಕರೆ ಎಂಥ ಅನಾಹುತ ಸಂಭವಿಸುತ್ತೆ ಅನ್ನೋದಕ್ಕೆ ಹಂದರಕಿ ಗ್ರಾಮದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.
ಇನ್ನು ಮಗನನ್ನ ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಮಗನ ಭವಿಷ್ಯದ ಬಗ್ಗೆ ಕನಸು ಕಂಡಿದ್ದ ಹೆತ್ತವರಿಗೆ ಈಗ ಉಳಿದಿರುವುದು ದುಃಖ ಮಾತ್ರ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೀಪಾವಳಿ ಪಟಾಕಿ: 32 ಜನರಿಗೆ ಗಾಯ
ದೀಪಾವಳಿ ಹಬ್ಬದ ಮೊದಲ ದಿನವೇ ಸಾಲು ಸಾಲು ಪಟಾಕಿ ಅವಾಂತರಗಳು ಸಂಭವಿಸಿದ್ದು, ಬೆಂಗಳೂರಲ್ಲಿ ಮಕ್ಕಳು ಮತ್ತು ವಯಸ್ಕರು ಸೇರಿ 32 ಜನರುಗಾಯಗೊಂಡಿದ್ದಾರೆ.
ಈ ಪೈಕಿ ನಾರಾಯಣ ನೇತ್ರಾಲಯದಲ್ಲಿ 20 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಒಂಬತ್ತು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಇಬ್ಬರು ಮತ್ತು ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ ಓರ್ವ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ. ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಪ್ರತಿ ವರ್ಷವೂ ಇಂತಹ ಪಟಾಕಿ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಪಟಾಕಿ ಸಿಡಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯ ಎಂದು ತಜ್ಞರು ತಿಳಿಸಿದ್ದಾರೆ.

