ನವದೆಹಲಿ: ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರು ದಿಢೀರ್ ರಾಜೀನಾಮೆ ನೀಡಿದ್ದಾರೆ.
ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಕ್ಯಾಂಪ್‌ಬೆಲ್ ವಿಲ್ಸನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ.
2022ರಲ್ಲಿ ನೇಮಕಗೊಂಡಿದ್ದ ಇವರ ಅಧಿಕಾರಾವಧಿ 2027ರವರೆಗೆ ಇತ್ತಾದರೂ, ವೈಯಕ್ತಿಕ ಅಥವಾ ಇತರ ಕಾರಣಗಳಿಂದಾಗಿ ಅವರು ಅವಧಿಗೂ ಮುನ್ನವೇ ಹೊರನಡೆದಿದ್ದಾರೆ ಎಂದು ವರದಿಯಾಗಿದೆ. ಏರ್ ಇಂಡಿಯಾದ ಬದಲಾವಣೆಯ ಪರ್ವದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಲ್ಸನ್ ಅವರ ನಿರ್ಗಮನವು ವಾಯುಯಾನ ವಲಯದಲ್ಲಿ ಕುತೂಹಲ ಮೂಡಿಸಿದೆ. ಕ್ಯಾಂಪ್‌ಬೆಲ್ ವಿಲ್ಸನ್ ಅವರನ್ನು ಐದು ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ಏರ್ ಇಂಡಿಯಾದ ಸಿಇಒ ಆಗಿ ಅವರ ಅಧಿಕಾರಾವಧಿಯು ಜುಲೈ 2027 ರಲ್ಲಿ ಮುಕ್ತಾಯಗೊಳ್ಳಬೇಕಿತ್ತು. ವಿಲ್ಸನ್ ಅವರು ನ್ಯೂಜಿಲೆಂಡ್‌ನ ಕ್ಯಾಂಟರ್ಬರಿ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಮಾಸ್ಟರ್ ಆಫ್ ಕಾಮರ್ಸ್ (ಪ್ರಥಮ ದರ್ಜೆ ಗೌರವ) ಪದವಿ ಪಡೆದಿದ್ದಾರೆ.
ವೃತ್ತಿ ಜೀವನದ ಹಿನ್ನೆಲೆ:
- ಕ್ಯಾಂಪ್‌ಬೆಲ್ ವಿಲ್ಸನ್ ಅವರನ್ನು 2022 ರಲ್ಲಿ ಏರ್ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (MD) ನೇಮಿಸಲಾಯಿತು.
- ವಾಯುಯಾನ ಕ್ಷೇತ್ರದಲ್ಲಿ 30 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವ ಇವರು, ಫುಲ್-ಸರ್ವಿಸ್ ಮತ್ತು ಕಡಿಮೆ ವೆಚ್ಚದ (low-cost) ವಿಮಾನಯಾನ ಸಂಸ್ಥೆಗಳೆರಡರಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
- ಏರ್ ಇಂಡಿಯಾ ಸೇರುವ ಮೊದಲು, ವಿಲ್ಸನ್ ಅವರು ಸಿಂಗಾಪುರ್ ಏರ್ಲೈನ್ಸ್ (SIA) ಅಂಗಸಂಸ್ಥೆಯಾದ ಸ್ಕೂಟ್ (Scoot) ವಿಮಾನಯಾನ ಸಂಸ್ಥೆಯ ಸಿಇಒ ಆಗಿ ಸೇವೆ ಸಲ್ಲಿಸಿದ್ದರು.
- ಅವರು 1996 ರಲ್ಲಿ ನ್ಯೂಜಿಲೆಂಡ್‌ನಲ್ಲಿ ಸಿಂಗಾಪುರ್ ಏರ್ಲೈನ್ಸ್‌ಗೆ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಸೇರುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಕೆನಡಾ, ಹಾಂಗ್ ಕಾಂಗ್ ಮತ್ತು ಜಪಾನ್‌ಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.
- 2011 ರಲ್ಲಿ ‘ಸ್ಕೂಟ್’ ಸಂಸ್ಥೆಯ ಸ್ಥಾಪಕ ಸಿಇಒ ಆಗಿ ಕಾರ್ಯನಿರ್ವಹಿಸಿದ ಇವರು, 2016 ರವರೆಗೆ ಆ ಸ್ಥಾನದಲ್ಲಿದ್ದರು.
- ನಂತರ ಸಿಂಗಾಪುರ್ ಏರ್ಲೈನ್ಸ್‌ನಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡಿದರು. ಏಪ್ರಿಲ್ 2020 ರಲ್ಲಿ ಅವರು ಎರಡನೇ ಬಾರಿಗೆ ಸ್ಕೂಟ್‌ನ ಸಿಇಒ ಆಗಿ ಮರಳಿದರು.

