ಫರಿದಾಬಾದ್: ಫರಿದಾಬಾದ್ ನ ಸೆಕ್ಟರ್ 21ಸಿ ಪ್ರದೇಶದಲ್ಲಿ ನೆರೆಹೊರೆಯವರ ನಡುವೆ ಉಂಟಾದ ಪಾರ್ಕಿಂಗ್ ವಿವಾದವೊಂದು ದುರಂತದಲ್ಲಿ ಅಂತ್ಯಗೊಂಡಿದೆ. ಇಲ್ಲಿ ‘ಟೆಕ್ ಮಹೀಂದ್ರಾ’ ಕಂಪನಿಯ ಮಾಜಿ ಬಿಸಿನೆಸ್ ಹೆಡ್ ಒಬ್ಬರನ್ನು ಅವರ ನೆರೆಯ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದಿದ್ದಾನೆ. ಆರೋಪಿಯು ಸಂತ್ರಸ್ತರ ಮೇಲೆ ಸುಮಾರು 15 ಸುತ್ತು ಗುಂಡುಗಳನ್ನು ಹಾರಿಸಿದ್ದಾನೆ ಎಂದು ಹೇಳಲಾಗಿದೆ.
ಮೃತಪಟ್ಟವರನ್ನು 42 ವರ್ಷದ ಪರಮ್ ಜೀತ್ ಧಂಕರ್ ಎಂದು ಗುರುತಿಸಲಾಗಿದೆ. ಅವರಿಗೆ ಏಳು ಗುಂಡುಗಳು ತಗುಲಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಸಿಂಗಾಪುರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ತಮ್ಮ ಸೋದರಳಿಯನ ಮದುವೆಗೆ ಹಾಜರಾಗಲು ನವೆಂಬರ್ 5 ರಂದು ಭಾರತಕ್ಕೆ ಮರಳಿದ್ದರು.
ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದ ಆರೋಪಿ ಮೋನು ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ.
ನಾಯಿ ಮತ್ತು ಪಾರ್ಕಿಂಗ್ ವಿಚಾರವಾಗಿ ವಿವಾದ
“ಪರಮ್ ಜೀತ್ ಅವರ ಪುತ್ರ ಶೌರ್ಯ ನೀಡಿದ ದೂರಿನ ಆಧಾರದ ಮೇಲೆ, ಮೋನು ಶರ್ಮಾ ಅಲಿಯಾಸ್ ಮೋಹನ್, ಆತನ ಪತ್ನಿ ದಿವ್ಯಾ, ಮಗ ಮಯಾಂಕ್, ಮಗಳು ನೈನಾ ಮತ್ತು ಸಹೋದರ ಹೇತ್ರಾಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪರಮ್ ಜೀತ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮುಖ್ಯ ಆರೋಪಿ ಮೋನು ಶರ್ಮಾನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ” ಎಂದು ಸೂರಜ್ ಕುಂಡ್ ಪೊಲೀಸ್ ಠಾಣೆಯ ಎಸ್ಎಚ್ಒ (SHO) ಪ್ರಹ್ಲಾದ್ ಸಿಂಗ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶುಕ್ರವಾರ ರಾತ್ರಿ ಪರಮ್ ಜೀತ್ ಜಿಮ್ ನಿಂದ ಮನೆಗೆ ಮರಳಿದಾಗ, ತಮ್ಮ ಕಾರನ್ನು ಬೇರೆಡೆಗೆ ನಿಲ್ಲಿಸುವಂತೆ (ಮೂವ್ ಮಾಡುವಂತೆ) ಮೋನುಗೆ ಹೇಳಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಜಗಳ ಉಂಟಾಗಿದ್ದು, ಆಗ ಆರೋಪಿ ಪರಮ್ ಜೀತ್ಗೆ ಗುಂಡಿಕ್ಕಿದ್ದಾನೆ. ಗುಂಡೇಟಿನಿಂದಾಗಿ ಪರಮ್ಜೀತ್ ಸ್ಥಳದಲ್ಲೇ ದುರಂತ ಸಾವನ್ನಪ್ಪಿದ್ದಾರೆ.
ಅಮೃತಸರದಲ್ಲಿ ಸ್ಕೂಟರ್ ಪಾರ್ಕಿಂಗ್ ವಿಚಾರವಾಗಿ 28 ವರ್ಷದ ವ್ಯಕ್ತಿಯ ಹತ್ಯೆ
ಪಂಜಾಬ್ನ ಅಮೃತಸರದಲ್ಲಿ, ಸ್ಕೂಟರ್ ಪಾರ್ಕಿಂಗ್ ವಿಚಾರವಾಗಿ ನಡೆದ ಜಗಳದ ನಂತರ 28 ವರ್ಷದ ಮಾರ್ಕೆಟಿಂಗ್ ವೃತ್ತಿಪರರೊಬ್ಬರನ್ನು ಅವರ ಮನೆಯ ಹೊರಗೇ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಘಟನೆಯು ಶುಕ್ರವಾರ ರಾತ್ರಿ ಚಭಾಲ್ ರಸ್ತೆಯ ಆನಂದ್ ಅವೆನ್ಯೂ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಅಮಿತ್ ಸಭರ್ವಾಲ್ ಎಂದು ಗುರುತಿಸಲಾಗಿದೆ. ಪಾರ್ಕ್ ಮಾಡಲಾಗಿದ್ದ ‘ಆಕ್ಟಿವಾ’ ಸ್ಕೂಟರ್ ಅನ್ನು ಬೇರೆಡೆಗೆ ಸರಿಸುವಂತೆ ಹೇಳಿ, ಪದೇ ಪದೇ ಕಾರಿನ ಹಾರ್ನ್ ಮೊಳಗಿಸಿದ ವ್ಯಕ್ತಿಯೊಬ್ಬ ಅಮಿತ್ಗೆ ಗುಂಡಿಕ್ಕಿದ್ದಾನೆ ಎಂದು ಆರೋಪಿಸಲಾಗಿದೆ.
ಪೊಲೀಸರ ಪ್ರಕಾರ, ಈ ಭಿನ್ನಾಭಿಪ್ರಾಯವು ತೀವ್ರ ವಾಗ್ವಾದಕ್ಕೆ ತಿರುಗಿದೆ. ಈ ವೇಳೆ ಆರೋಪಿಯು ಅಮಿತ್ ಗೆ ಹತ್ತಿರದಿಂದ ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯು ರಾಜಕೀಯ ವಿವಾದಕ್ಕೂ ಎಡೆಮಾಡಿಕೊಟ್ಟಿದ್ದು, ಪಂಜಾಬ್ನಲ್ಲಿನ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಕಾನೂನು ಸುವ್ಯವಸ್ಥಾ ಪರಿಸ್ಥಿತಿಯ ಬಗ್ಗೆ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.
ಗುಂಡಿನ ದಾಳಿಯ ನಂತರ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ವಿವಾದವು ಉಲ್ಬಣಗೊಳ್ಳಲು ಕಾರಣವಾದ ಸನ್ನಿವೇಶಗಳು ಮತ್ತು ಘಟನೆಗಳ ಸರಣಿಯ ಬಗ್ಗೆ ತನಿಖೆಯ ಭಾಗವಾಗಿ ಪರಿಶೀಲನೆ ನಡೆಸಲಾಗುತ್ತಿದೆ.

