ನವದೆಹಲಿ: ಹಿರಿಯ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರ 99ನೇ ಜನ್ಮದಿನವನ್ನು ಬಿಜೆಪಿ ಭಾನುವಾರ ತನ್ನ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಆಚರಿಸಲಿದೆ. ಈ ಸಂದರ್ಭದಲ್ಲಿ ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ವಿಶೇಷ ಹವನ ಹಾಗೂ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ.
1927ರ ನವೆಂಬರ್ 8ರಂದು ಜನಿಸಿದ ಅಡ್ವಾಣಿ, ಈಗ 100ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅಡ್ವಾಣಿ ಅವರ ಪುತ್ರಿ ಪ್ರತಿಭಾ ಅಡ್ವಾಣಿ ಅವರ ಉಪಸ್ಥಿತಿಯಲ್ಲಿ, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹವನ ಮತ್ತು ಪೂಜೆಯ ನಂತರ, ಅಡ್ವಾಣಿ ಅವರ ಜೀವನ ಮತ್ತು ರಾಜಕೀಯ ಪಯಣದ ಕುರಿತು ವಿಶೇಷ ಪ್ರಸ್ತುತಿಯನ್ನು ಏರ್ಪಡಿಸಲಾಗುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದ ವಿತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ಆರೋಗ್ಯ ಸಮಸ್ಯೆಗಳು
ಎದೆಗೆ ಸಂಬಂಧಿಸಿದ ಸೋಂಕಿನ(chest infection) ಚಿಕಿತ್ಸೆಗಾಗಿ ನವದೆಹಲಿಯ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ಅಡ್ವಾಣಿ, ಅಕ್ಟೋಬರ್ 19ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಇದಕ್ಕೂ ಮೊದಲು, ಮೇ ತಿಂಗಳಲ್ಲಿ ವಯೋಸಹಜ ಅನಾರೋಗ್ಯದ ಕಾರಣದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಕೆಲವು ದಿನಗಳ ನಂತರ ಚೇತರಿಸಿಕೊಂಡು ಮನೆಗೆ ಮರಳಿದ್ದರು.
2024ರಲ್ಲಿ ಅವರು ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು; ಇದರಲ್ಲಿ ಅಪೊಲೊ ಆಸ್ಪತ್ರೆ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಕೂಡ ಸೇರಿವೆ. ಅದೇ ವರ್ಷದ ಡಿಸೆಂಬರ್‌ನಲ್ಲಿ ಅವರು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆದಿದ್ದರು ಮತ್ತು ಡಿಸೆಂಬರ್ 25ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.
ಸರ್ಕಾರದ ಮುಖ್ಯಸ್ಥರಾಗಿ(ಪ್ರಧಾನ ಮಂತ್ರಿಯಾಗಿ) 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 7ರಂದು ದೆಹಲಿಯಲ್ಲಿರುವ ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದಿದ್ದರು. ಈ ಭೇಟಿಯ ನಂತರ, ಅಡ್ವಾಣಿ ಅವರ ದಶಕಗಳ ಸಾರ್ವಜನಿಕ ಸೇವೆಯು ರಾಷ್ಟ್ರೀಯ ಜೀವನದ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದರು.
ಬಿಜೆಪಿಯ ಏಳಿಗೆಯಲ್ಲಿ ಪ್ರಮುಖ ವ್ಯಕ್ತಿ
ಕರಾಚಿಯಲ್ಲಿ ಜನಿಸಿದ ಅಡ್ವಾಣಿ, 1947ರ ವಿಭಜನೆಯ ಸಮಯದಲ್ಲಿ ಭಾರತಕ್ಕೆ ಬಂದರು. ಅವರು ಬಿಜೆಪಿಯ ಬೆಳವಣಿಗೆಯಲ್ಲಿ ಕೇಂದ್ರ ವ್ಯಕ್ತಿಯಾದರು ಮತ್ತು ಪಕ್ಷದ ಅಧ್ಯಕ್ಷರಾಗಿ ಮೂರು ಅವಧಿಗಳ ಕಾಲ ಸೇವೆ ಸಲ್ಲಿಸಿದರು.
ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿ ಹಾಗೂ 2002 ರಿಂದ 2004 ರವರೆಗೆ ಉಪ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಅಡ್ವಾಣಿ ಅವರಿಗೆ ಮಾರ್ಚ್ 2024 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ವನ್ನು ನೀಡಿ ಗೌರವಿಸಲಾಯಿತು. ಪ್ರಧಾನಿ ಮೋದಿ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಡ್ವಾಣಿ ಅವರ ನಿವಾಸದಲ್ಲಿಯೇ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

