ಇಂಫಾಲ್: ಕಳೆದ ಕೆಲವು ಸಮಯದಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರದ ಕಿಡಿ ಹೊತ್ತಿಕೊಂಡಿದೆ. ಬಿಷ್ಣುಪುರ ಜಿಲ್ಲೆಯ ಬಿಎಸ್‌ಎಫ್ ಯೋಧನ ಮನೆಯ ಮೇಲೆ ನಡೆದ ಶಂಕಿತ ರಾಕೆಟ್ ದಾಳಿಯಲ್ಲಿ 5 ವರ್ಷದ ಬಾಲಕ ಹಾಗೂ ಕೇವಲ 5 ತಿಂಗಳ ಹಸುಗೂಸು ಮೃತಪಟ್ಟಿವೆ. ಬೆಟ್ಟದ ಸಾಲುಗಳಿಂದ ಹಾರಿಬಂದ ಈ ದಾಳಿಯು ನಾಗರಿಕರಲ್ಲಿ ತೀವ್ರ ಭೀತಿ ಹುಟ್ಟಿಸಿದ್ದು, ರಾಜ್ಯದ ಗಡಿ ಭಾಗಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ.
ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಸಂಭವಿಸಿದ ಶಂಕಿತ ರಾಕೆಟ್ ಅಥವಾ ಮೋರ್ಟಾರ್ ದಾಳಿಯು ಇಡೀ ರಾಜ್ಯವನ್ನು ಮತ್ತೆ ಆತಂಕಕ್ಕೆ ತಳ್ಳಿದೆ. ನಾಗರಿಕರ ಮನೆಯೊಂದರ ಮೇಲೆ ನಡೆದ ಈ ಭೀಕರ ದಾಳಿಯಲ್ಲಿ ಇಬ್ಬರು ಚಿಕ್ಕ ಮಕ್ಕಳು ಸಾವನ್ನಪ್ಪಿದ್ದು, ಅವರ ತಾಯಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೊಯಿರಾಂಗ್‌ನ ಟ್ರೊಂಗ್ಲಾವೊಬಿ ಅವಾಂಗ್ ಲೈಕೈ ಗ್ರಾಮ (ಬೆಟ್ಟ ಮತ್ತು ಕಣಿವೆಯ ಗಡಿ ಭಾಗ) ದಲ್ಲಿ ಏಪ್ರಿಲ್ 7 ರ ಮುಂಜಾನೆ ಘಟನೆ ನಡೆದಿದೆ.
ದಾಳಿಯ ಸಮಯದಲ್ಲಿ ಮನೆಯಲ್ಲಿದ್ದ ಯೋಧನ ಪತ್ನಿ ಓಯಿನಂ ಬಿಿನಿತಾ (37) ಮತ್ತು ಅವರ ಇಬ್ಬರು ಮಕ್ಕಳು (5 ವರ್ಷದ ಗಂಡು ಮಗು ಮತ್ತು 5 ತಿಂಗಳ ಹಸುಗೂಸು) ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಇಂಫಾಲ್‌ನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮಕ್ಕಳು ಮೃತಪಟ್ಟಿದ್ದಾರೆ. ತಾಯಿ ಬಿನಿತಾ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

