ಉದ್ಯಾನ ನಗರಿ ಬೆಂಗಳೂರು 23ನೇ ಚಿತ್ರಸಂತೆಗೆ ತಯಾರಾಗಿದೆ. ಪ್ರತಿ ವರ್ಷದ ಮೊದಲ ಭಾನುವಾರ ಕುಮಾರ ಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಸಂತೆಯನ್ನು ಆಯೋಜನೆ ಮಾಡಲಾಗುತ್ತದೆ.
2026ನೇ ಸಾಲಿನ ಚಿತ್ರಸಂತೆ ಜನವರಿ 4ರ ಭಾನುವಾರ ನಡೆಯಲಿದೆ. ‘ಪ್ರಕೃತಿ’ ವಿಷಯಾಧಾರಿತವಾಗಿ ಈ ಬಾರಿಯ ಚಿತ್ರಸಂತೆ ನಡೆಯಲಿದ್ದು, ಸುಮಾರು 4 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಚಿತ್ರಸಂತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಉಪಸ್ಥಿತರಿರುತ್ತಾರೆ.
ಚಿತ್ರಸಂತೆಗೆ ಬೆಂಗಳೂರು ನಗರದ ನಾನಾ ಪ್ರದೇಶದಿಂದ ಜನರು ಆಗಮಿಸುತ್ತಾರೆ. ಇಡೀ ದಿನ ಶಿವಾನಂದ ಸರ್ಕಲ್ ಬಳಿಯಿಂದ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿರುತ್ತದೆ. ಚಿತ್ರಸಂತೆಗೆ ಆಗಮಿಸುವ ಜನರ ಅನುಕೂಲಕ್ಕಾಗಿ ಬಿಎಂಟಿಸಿ ವಿಶೇಷ ಬಸ್‌ಗಳನ್ನು ಓಡಿಸಲಿದೆ.
ಬಿಎಂಟಿಸಿ ಚಿತ್ರಸಂತೆಗೆ ಆಗಮಿಸುವ ಜನರ ಅನುಕೂಲಕ್ಕಾಗಿ ಬಿಎಂಟಿಸಿ ಫೀಡರ್ ಬಸ್ ಸೇವೆಗಳನ್ನು ಘೋಷಣೆ ಮಾಡಿದೆ. ಜನವರಿ 4ರಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ವಿಶೇಷ ಮೆಟ್ರೋ ಫೀಡರ್ ಬಸ್‌ಗಳು ಸಂಚಾರವನ್ನು ನಡೆಸಲಿವೆ. ದರ 15 ರೂ.ಗಳು.
ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಸಾಗುವ ಮಾರ್ಗದ ಕುರಿತು ಬಿಎಂಟಿಸಿ ಮಾಹಿತಿ ನೀಡಿದೆ. ಈ ವಿಶೇಷ ಮೆಟ್ರೋ ಫೀಡರ್ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣ-ವಿಧಾನಸೌಧ, ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ-ವಿಧಾನಸೌಧ ಸಂಚಾರವನ್ನು ನಡೆಸಲಿವೆ.
ಕೆಂಪೇಗೌಡ ಬಸ್ ನಿಲ್ದಾಣ-ವಿಧಾನಸೌಧ ನಡುವಿನ ಬಸ್ ವಯಾ ಸೆಂಟ್ರಲ್ ಟಾಕೀಸ್, ಆನಂದ್ ರಾವ್ ಸರ್ಕಲ್, ಶಿವಾನಂದ ಸ್ಟೋರ್ಸ್ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತದೆ. ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ-ವಿಧಾನಸೌಧ ಮಾರ್ಗದ ಬಸ್ ವಯಾ ಆನಂದ್ ರಾವ್ ಸರ್ಕಲ್, ಶಿವಾನಂದ ಸ್ಟೋರ್ಸ್ ಮಾರ್ಗದಲ್ಲಿ ಸಂಚಾರವನ್ನು ನಡೆಸಲಿವೆ ಎಂದು ಪ್ರಕಟಣೆ ತಿಳಿಸಿದೆ.
23ನೇ ಚಿತ್ರಸಂತೆ: ಬೆಂಗಳೂರು ನಗರದಲ್ಲಿ ಕರಗ, ಕಡಲೆಕಾಯಿ ಪರಿಷೆ, ಫಲಪುಷ್ಪ ಪ್ರದರ್ಶನ ಮಾದರಿಯಲ್ಲಿ ಪ್ರತಿ ವರ್ಷ ನಡೆಯುವ ಕಾರ್ಯಕ್ರಮ ಚಿತ್ರಕಲಾ ಪರಿಷತ್ ಆಯೋಜನೆ ಮಾಡುವ ಚಿತ್ರಸಂತೆ.
ಚಿತ್ರಸಂತೆ ಕುರಿತು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮಾಹಿತಿ ನೀಡಿದ್ದಾರೆ, “ವಿಶ್ವದೆಲ್ಲಡೆ ಪರಿಸರ ಜಾಗೃತಿ ಕುರಿತು ಚರ್ಚೆಗಳು ನಡೆಯುತ್ತಿವೆ. ಆದ್ದರಿಂದ ಪ್ರಕೃತಿ ವಿಷಯಾಧಾರಿತವಾಗಿ ಈ ಬಾರಿಯ ಚಿತ್ರಸಂತೆ ಆಯೋಜನೆ ಮಾಡಲಾಗಿದೆ. 22 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳ 1,500ಕ್ಕೂ ಅಧಿಕ ಕಲಾವಿದರು ಈ ಬಾರಿ ಪಾಲ್ಗೊಳ್ಳಲಿದ್ದಾರೆ” ಎಂದು ಹೇಳಿದರು.
“ಮೂರು ಸಾವಿರಕ್ಕೂ ಅಧಿಕ ಕಲಾವಿದರು ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದರು. ಈ ಪೈಕಿ ಅರ್ಧದಷ್ಟು ಕಲಾವಿದರಿಗೆ ಭೌತಿಕವಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಅರ್ಜಿಗಳನ್ನು ತಿರಸ್ಕಾರ ಮಾಡಿದ ಕಲಾವಿದರು ಜನವರಿ ಅಂತ್ಯದ ತನಕ ವರ್ಚುವಲ್ ಮೂಲಕ ಪ್ರದರ್ಶನ ನಡೆಸಲು ಅವಕಾಶ ನೀಡಲಾಗಿದೆ” ಎಂದರು.
“ಜನವರಿ 4ರಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರಸಂತೆ ಉದ್ಘಾಟಿಸಲಿದ್ದಾರೆ. ಕಲಾ ಪ್ರದರ್ಶನವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 8 ರಿಂದ ರಾತ್ರಿ 8ರ ತನಕ ಪ್ರದರ್ಶನ ನಡೆಯಲಿದೆ” ಎಂದು ವಿವರಣೆ ನೀಡಿದರು.
“ಚಿತ್ರಸಂತೆಗೆ ಸಲ್ಲಿಕೆಯಾಗಿದ್ದ ಅರ್ಜಿಗಳ ಪೈಕಿ ಉತ್ತಮ ಕಲಾವಿದರನ್ನು ಆಯ್ಕೆ ಮಾಡಲು ತಜ್ಞರ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಚಿತ್ರಸಂತೆ ಮೂಲಕ ಕಲಾವಿದರ ಪ್ರತಿಭೆ ಅನಾವರಣಕ್ಕೆ ಮತ್ತು ಅವರ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಲಾವಿದರಿಂದ ಯಾವುದೇ ಶುಲ್ಕ ವಸೂಲಿ ಮಾಡಿಲ್ಲ” ಎಂದರು.
“ಕರ್ನಾಟಕದ ಕಲಾವಿದರಿಗೆ ಶೇ 50ರಷ್ಟು ಮೀಸಲಾತಿ ನೀಡಲಾಗಿದೆ. ಉಳಿದಂತೆ ಮೇಘಾಲಯ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಜಾರ್ಖಂಡ್, ಲಕ್ಷದ್ವೀಪ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು`ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಮಾಹಿತಿ ನೀಡಿದರು.

