ಬೆಂಗಳೂರು: ಸ್ಮಾರ್ಟ್ಫೋನ್ ಬಳಸುವ ಪ್ರತಿಯೊಬ್ಬರ ಅವಿಭಾಜ್ಯ ಅಂಗವಾಗಿರುವ ವಾಟ್ಸಾಪ್ (WhatsApp) ಬಳಕೆದಾರರಿಗೆ ಈಗ ಆತಂಕಕಾರಿ ಸುದ್ದಿಯೊಂದು ಕೇಳಿಬರುತ್ತಿದೆ. ಇಷ್ಟು ದಿನ ಸಂಪೂರ್ಣ ಉಚಿತವಾಗಿ ಲಭ್ಯವಿದ್ದ ಈ ಮೆಸೇಜಿಂಗ್ ಅಪ್ಲಿಕೇಶನ್, ಮುಂದಿನ ದಿನಗಳಲ್ಲಿ ‘ಪೇಯ್ಡ್’ (Paid) ಆಗುವ ಸಾಧ್ಯತೆ ದಟ್ಟವಾಗಿದೆ.
ಹೌದು, ಮೆಟಾ ಮಾಲೀಕತ್ವದ ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಶೀಘ್ರದಲ್ಲೇ ಭಾರಿ ಬದಲಾವಣೆಯನ್ನು ತರಲಿದೆ. ಈವರೆಗೆ ಸಂಪೂರ್ಣ ಉಚಿತವಾಗಿದ್ದ ವಾಟ್ಸಾಪ್ ಸೇವೆಗಳಿಗೆ ಇನ್ನು ಮುಂದೆ ಹಣ ಪಾವತಿಸಬೇಕಾಗಬಹುದು ಎಂಬ ಸುದ್ಧಿ ಹರಿದಾಡುತ್ತಿದೆ. ಜಾಹೀರಾತು ರಹಿತ ಅನುಭವಕ್ಕಾಗಿ ಮತ್ತು ಪ್ರೀಮಿಯಂ ಫೀಚರ್ಗಳಿಗಾಗಿ ಮಾಸಿಕ ಚಂದಾದಾರಿಕೆ (Subscription) ಮಾದರಿಯನ್ನು ಪರಿಚಯಿಸಲು ಕಂಪನಿ ಯೋಜಿಸುತ್ತಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ವಾಟ್ಸಾಪ್ ತನ್ನ ‘ಸ್ಟೇಟಸ್’ (Status) ಮತ್ತು ‘ಚಾನೆಲ್ಸ್’ (Channels) ವಿಭಾಗಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಸಿದ್ಧತೆ ನಡೆಸುತ್ತಿದೆ. ಒಂದು ವೇಳೆ ನಿಮಗೆ ಈ ಜಾಹೀರಾತುಗಳು ಬೇಡವೆಂದಾದಲ್ಲಿ ಅಥವಾ ಕ್ಲೀನ್ ಆದ ಇಂಟರ್ಫೇಸ್ ಬೇಕಿದ್ದಲ್ಲಿ, ನೀವು ಮಾಸಿಕ ಚಂದಾದಾರಿಕೆ ಹಣವನ್ನು ಪಾವತಿಸಬೇಕಾಗುತ್ತದೆ. ಯುರೋಪ್ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಈಗಾಗಲೇ ಇದರ ಪರೀಕ್ಷಾರ್ಥ ಪ್ರಯೋಗ ನಡೆಯುತ್ತಿದ್ದು, ಶೀಘ್ರದಲ್ಲೇ ಭಾರತಕ್ಕೂ ಇದು ಅನ್ವಯವಾಗುವ ಸಾಧ್ಯತೆ ಇದೆ.
ಯಾವ ಸೇವೆಗಳು ಉಚಿತವಾಗಿರುತ್ತವೆ ?
ಹಾಗೆಂದು ವಾಟ್ಸಾಪ್ ಸಂಪೂರ್ಣವಾಗಿ ಹಣ ಪಡೆದ ನಂತರವೇ ಕೆಲಸ ಮಾಡುತ್ತದೆ ಎಂದು ಗಾಬರಿಪಡುವ ಅಗತ್ಯವಿಲ್ಲ. ಮೂಲಭೂತ ಸೇವೆಗಳಾದ ವೈಯಕ್ತಿಕ ಚಾಟಿಂಗ್ (Personal Chats), ಆಡಿಯೋ ಮತ್ತು ವಿಡಿಯೋ ಕರೆಗಳು ಎಂದಿನಂತೆ ಉಚಿತವಾಗಿ ಮುಂದುವರಿಯಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರೀಮಿಯಂ ಫೀಚರ್ಗಳು ಮತ್ತು ಎಐ (AI) ಆಧಾರಿತ ವಿಶೇಷ ಸೌಲಭ್ಯಗಳನ್ನು ಬಳಸಲು ಮಾತ್ರ ಹಣ ನೀಡಬೇಕಾಗಬಹುದು.
ಮೆಟಾದ ಹೊಸ ಪ್ಲಾನ್: ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಮಾದರಿಯಲ್ಲೇ ವಾಟ್ಸಾಪ್ ಮೂಲಕವೂ ಆದಾಯ ಗಳಿಸಲು ಮೆಟಾ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈಗಾಗಲೇ ವಾಟ್ಸಾಪ್ ಬಿಸಿನೆಸ್ ಬಳಕೆದಾರರಿಗೆ ಕೆಲವು ಶುಲ್ಕಗಳು ಅನ್ವಯವಾಗುತ್ತಿದ್ದು, ಈಗ ಸಾಮಾನ್ಯ ಬಳಕೆದಾರರಿಗೂ ಆಯ್ದ ಸೇವೆಗಳನ್ನು ಹಣದ ರೂಪದಲ್ಲಿ ನೀಡಲು ಕಂಪನಿ ಮುಂದಾಗಿದೆ. ಒಟ್ಟಿನಲ್ಲಿ, ಸದ್ಯದಲ್ಲೇ ನಿಮ್ಮ ವಾಟ್ಸಾಪ್ ಕೂಡ ಹಣ ಕೇಳಿದರೆ ಅಚ್ಚರಿಪಡಬೇಕಿಲ್ಲ!
ಓದುಗರೇ ಗಮನಿಸಿ : ಇದು ಅಧಿಕೃತವಾಗಿ ಜಾರಿಯಾಗುವ ಮೊದಲು ಕಂಪನಿಯು ಕೆಲವು ಬದಲಾವಣೆಗಳನ್ನು ಮಾಡಬಹುದು ಅಥವಾ ಈ ವರದಿಗಳು ಕೇವಲ ಪ್ರಾಯೋಗಿಕ ಹಂತದಲ್ಲಿರಬಹುದು.

