ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಬಲ್ದೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆದ ಕೊಪ್ಪಳ ಬಂದ್ ಯಶಸ್ವಿಯಾಗಿದೆ. ಕಾರ್ಖಾನೆಯಿಂದ ಹೊರ ಬರುವ ಹೊಗೆ ಮತ್ತು ಧೂಳಿನಿಂದಾಗಿ ಬೆಳೆಗಳು ಹಾಳಾಗುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ್ ಕೊನೆಯಲ್ಲಿ 8 ನಿರ್ಣಯ ಕೈಗೊಳ್ಳಲಾಗಿದೆ.
ಕೊಪ್ಪಳ ಬಂದ್ ಕೊನೆಯಲ್ಲಿ ಹೋರಾಟಗಾರರು 8 ನಿರ್ಣಯಗಳನ್ನು ಕೈಗೊಂಡಿದ್ದಾರೆ.
ಯಾವುದೇ ಕಾರಣಕ್ಕೂ ಬಲ್ದೋಟಾ ಕಾರ್ಖಾನೆ ವಿಸ್ತರಣೆ ಆಗಬಾರದು. ಕೊಪ್ಪಳ ಜಿಲ್ಲೆಗೆ ಯಾವುದೇ ಹೊಸ ಕಾರ್ಖಾನೆ ಬರುವುದು ಬೇಡ. ಸರ್ವ ಪಕ್ಷ ನಾಯಕರ ನಿಯೋಗ ಮುಖ್ಯಮಂತ್ರಿ ಭೇಟಿಯಾಗಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಉಸ್ತುವಾರಿ ಸಚಿವರು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ಬಲ್ದೋಟಾ ಕಾರ್ಖಾನೆ ಆವರಣದಲ್ಲಿರುವ 45 ಎಕರೆ ವಿಸ್ತೀರ್ಣದ ಕೆರೆಯನ್ನು ರೈತರಿಗೆ ಮುಕ್ತಗೊಳಿಸಬೇಕು. ಹೈಕೋರ್ಟ್ ಆದೇಶದಂತೆ ರೈತರಿಗೆ ಕೆರೆಯನ್ನು ಮುಕ್ತಗೊಳಿಸಬೇಕು. 20 ಗ್ರಾಮಗಳ ನಿವಾಸಿಗಳ ಆರೋಗ್ಯದ ಬಗ್ಗೆ ಸಮೀಕ್ಷೆ ನಡೆಸಬೇಕು. ಹಿರೇಬಗನಾಳ, ಅಲ್ಲಾ ನಗರದ ಬಳಿ ಇರುವ ಕಾರ್ಖಾನೆ ಸ್ಥಳಾಂತರ ಮಾಡಬೇಕು. ತಜ್ಞರ ವರದಿ ಆಧರಿಸಿ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು. ಬಾಧಿತ ಹಳ್ಳಿಗಳಿಗೆ ಮುಖ್ಯಮಂತ್ರಿ, ಸಚಿವರು ಭೇಟಿ ನೀಡಿ ಪರಿಶೀಲಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಕಾರ್ಖಾನೆಗಳ ತ್ಯಾಜ್ಯದಿಂದ ತುಂಗಭದ್ರಾ ನದಿ ನೀರು ಮಲಿನವಾಗುತ್ತಿದೆ. ಮುಂದಿನ ದಿನಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಬಂದ್ ಗೆ ಕರೆ ನೀಡಲಾಗುವುದು. ತುಂಗಭದ್ರಾ ನದಿ ಉಳಿಸುವ ನಿಟ್ಟಿನಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಹೋರಾಟದ ಉಸ್ತುವಾರಿ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಬಲ್ಡೋಟಾ ಕಾರ್ಖಾನೆ ಬಳಿ ನಡೆದ ಹೋರಾಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

