ಅಗತ್ಯ ಬಿದ್ದಾಗಲೇ ನಮ್ಮ ವೋಟರ್ ಐಡಿ ಕಾರ್ಡ್ ನೆನಪಾಗುವುದು ಸಾಮಾನ್ಯ. ಮತದಾನ ಮಾಡುವ ಸಮಯದಲ್ಲೋ ಅಥವಾ ಯಾವುದಾದರೂ ಸರ್ಕಾರಿ, ಖಾಸಗಿ ಕೆಲಸಕ್ಕೆ ಗುರುತಿನ ಚೀಟಿ ಬೇಕಾದಾಗಲೋ ವೋಟರ್ ಐಡಿ ಹುಡುಕಲು ಶುರು ಮಾಡುತ್ತೇವೆ. ಆದರೆ ಎಷ್ಟೇ ಹುಡುಕಿದರೂ ಕೆಲವೊಮ್ಮೆ ಕಾರ್ಡ್ ಕೈಗೆ ಸಿಗುವುದೇ ಇಲ್ಲ. ಇನ್ನು ಕೆಲವರಿಗೆ ವೋಟರ್ ಐಡಿ ಕಳೆದುಹೋಗಿದ್ದರೆ, ಮತ್ತೆ ಕೆಲವರು ಅದನ್ನು ಎಲ್ಲಿ ಇಟ್ಟಿದ್ದೇವೆ ಎಂಬುದನ್ನೇ ಮರೆತಿರುತ್ತಾರೆ. ಆಗ ಹೊಸ ಕಾರ್ಡ್ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕೇ? ಅರ್ಜಿ ಸಲ್ಲಿಸಿ ದಿನಗಟ್ಟಲೆ ಕಾಯಬೇಕೇ? ಎಂಬ ಆತಂಕ ಎದುರಾಗುತ್ತದೆ. ಆದರೆ ಇನ್ಮುಂದೆ ಇಂತಹ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ವೋಟರ್ ಐಡಿ ಕಾರ್ಡ್ ಕೈಯಲ್ಲಿ ಇಲ್ಲದಿದ್ದರೂ, ಮೊಬೈಲ್ ಫೋನ್ ಬಳಸಿ ಮನೆಯಲ್ಲೇ ಕುಳಿತು ಡಿಜಿಟಲ್ ವೋಟರ್ ಐಡಿ (e-EPIC) ಡೌನ್‌ಲೋಡ್ ಮಾಡಿಕೊಳ್ಳಬಹುದು.
ಒಂದು ವೇಳೆ ನಿಮ್ಮ ವೋಟರ್ ಐಡಿ ಕಾರ್ಡ್ ಕಳೆದುಹೋದರೆ ಅಥವಾ ಕೈಯಲ್ಲಿ ಇಲ್ಲದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಮೂಲಕ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್‌ನಲ್ಲಿಯೇ ಡಿಜಿಟಲ್ ವೋಟರ್ ಐಡಿ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹಾಗಾದರೆ ವೋಟರ್ ಐಡಿ ಕಾರ್ಡ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ.
ಮೊಬೈಲ್‌ನಲ್ಲಿ ವೋಟರ್ ಐಡಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
-
ಮೊದಲಿಗೆ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ https://voters.eci.gov.in ಗೆ ಭೇಟಿ ನೀಡಿ.
-
ವೆಬ್‌ಸೈಟ್‌ನ ಮುಖಪುಟದಲ್ಲಿ ಕೆಳಗೆ ಸ್ಕ್ರಾಲ್ ಮಾಡಿದಾಗ ಕಾಣಿಸುವ ‘e-EPIC Download’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-
ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ. ಹೊಸ ಬಳಕೆದಾರರಾಗಿದ್ದರೆ ಮೊದಲು ನೋಂದಣಿ ಮಾಡಿಕೊಳ್ಳಿ.
-
ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ ‘Request OTP’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-
ನಿಮ್ಮ ಮೊಬೈಲ್‌ಗೆ ಬಂದ OTP ನಮೂದಿಸಿ ಪರಿಶೀಲನೆ ಪೂರ್ಣಗೊಳಿಸಿ.
-
ಬಳಿಕ ನಿಮ್ಮ ವೋಟರ್ ಐಡಿ ಕಾರ್ಡ್‌ನಲ್ಲಿರುವ EPIC ಸಂಖ್ಯೆಯನ್ನು ನಮೂದಿಸಿ.
-
ನಂತರ ನಿಮ್ಮ ರಾಜ್ಯ, ಜನ್ಮ ದಿನಾಂಕ, ವಿಧಾನಸಭಾ ಕ್ಷೇತ್ರ ಮತ್ತು ಗ್ರಾಮದ ವಿವರಗಳನ್ನು ನಮೂದಿಸಿ.
-
ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ ‘Search’ ಬಟನ್ ಕ್ಲಿಕ್ ಮಾಡಿ.
-
ಆಗ ನಿಮ್ಮ ವೋಟರ್ ಐಡಿ ಸಂಖ್ಯೆ, ಹೆಸರು, ತಂದೆ ಅಥವಾ ತಾಯಿಯ ಹೆಸರು ಹಾಗೂ ಮೊಬೈಲ್ ಸಂಖ್ಯೆಗೆ ಸಂಬಂಧಿಸಿದ ವಿವರಗಳು ಕಾಣಿಸುತ್ತವೆ.
-
ಅಲ್ಲಿ ಕಾಣಿಸುವ ‘Download’ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಡಿಜಿಟಲ್ ವೋಟರ್ ಐಡಿ ಕಾರ್ಡ್ PDF ರೂಪದಲ್ಲಿ ಡೌನ್‌ಲೋಡ್ ಆಗುತ್ತದೆ.
ಒಂದು ವಿಷಯ ನೆನಪಿರಲಿ!
ವೋಟರ್ ಐಡಿ ಡೌನ್‌ಲೋಡ್ ಮಾಡಿಕೊಳ್ಳಲು ಚುನಾವಣಾ ಆಯೋಗದ ದಾಖಲೆಗಳಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು. ಮೊಬೈಲ್ ಸಂಖ್ಯೆ ಲಿಂಕ್ ಆಗಿಲ್ಲದಿದ್ದರೆ ಫಾರಂ 8 ಮೂಲಕ ಅಗತ್ಯ ತಿದ್ದುಪಡಿ ಮಾಡಿಕೊಳ್ಳಬಹುದು.
ಹೀಗಾಗಿ ವೋಟರ್ ಐಡಿ ಕಾರ್ಡ್ ಕಳೆದುಹೋಗಿದೆ ಎಂದು ಇನ್ನು ಮುಂದೆ ಆತಂಕಪಡುವ ಅಗತ್ಯವಿಲ್ಲ. ಡಿಜಿಟಲ್ ಸೌಲಭ್ಯ ಬಳಸಿಕೊಂಡು ಮನೆಯಲ್ಲೇ ಕುಳಿತು ನಿಮ್ಮ ಗುರುತಿನ ಚೀಟಿಯನ್ನು ಪಡೆಯಬಹುದು.
ಗಮನಿಸಿ: ಡೌನ್‌ಲೋಡ್ ಪ್ರಕ್ರಿಯೆಗಾಗಿ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ಮಾತ್ರ ಬಳಸಿ. OTP ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

