ಧಾರವಾಡ: ರಾಜಕೀಯ ಪಕ್ಷಗಳು ಯುವ ಪೀಳಿಗೆಗೆ ಸಮಾನತೆ, ಪ್ರೀತಿ, ಕೋಮು ಸೌಹಾರ್ದತೆ ಕೊಡುಗೆ ನೀಡಬೇಕು ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಹೇಳಿದ್ದಾರೆ.
ಅವರು ಇಂದು ಕಲಘಟಗಿ ವಿಧಾನ ಸಭಾ ಮತ ಕ್ಷೇತ್ರದ ಧಾರವಾಡ ತಾಲೂಕಿನ ಮನಸೂರು, ಮನಗುಂಡಿ, ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಪ್ರಜಾಸೇವಾ ಆಂದೋಲನ ಸಭೆ ಜರುಗಿಸಿ, ಮಾತನಾಡಿದರು.
ಪ್ರಜಾಸೇವಾ ಕಾರ್ಯಕ್ರಮಗಳ ಮೂಲಕ ಜಿಲ್ಲಾಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಗ್ರಾಮ ಪಂಚಾಯತಿ ಕೇಂದ್ರಸ್ಥಾನಕ್ಕೆ ಕರೆತಂದು, ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಗ್ರಾಮದ ಅಭಿವೃದ್ಧಿ ಹಾಗೂ ಜನರ ಕಷ್ಟಗಳ ನಿವಾರಣೆಗಾಗಿ ಯಾವುದೇ ರಾಜಕೀಯ ಪಕ್ಷದ ಭೇದಭಾವವಿಲ್ಲದೆ ಎಲ್ಲ ಸಮಾಜದ ಮುಖಂಡರು ಪಕ್ಷಾತೀತವಾಗಿ ಒಂದಾಗಿ ಬರಬೇಕು. ರಾಜಕೀಯ ಪಕ್ಷಗಳು ಯುವ ಪೀಳಿಗೆಗೆ ಸಮಾನತೆ, ಪ್ರೀತಿ, ಕೋಮು ಸೌಹಾರ್ದತೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಐದು ಗ್ಯಾರಂಟಿ ಯೋಜನೆಗಳಿಗಾಗಿ ಸುಮಾರು 60,000 ಕೋಟಿ ರೂಪಾಯಿಗಳನ್ನು ವರ್ಷಕ್ಕೆ ಒದಗಿಸಲಾಗುತ್ತಿದೆ. ಕೇವಲ ಧಾರಾವಾಡ ಜಿಲ್ಲೆಯಲ್ಲಿಯೇ 45 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ, ಒಟ್ಟಾರೆ ಸರ್ಕಾರದ ವತಿಯಿಂದ ರೂ. 995 ಕೋಟಿ ವೆಚ್ಚ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಧಾರವಾಡ ಜಿಲ್ಲೆಯ 4,04,827 ಮಹಿಳೆಯರಿಗೆ ಇಲ್ಲಿಯವರೆಗೆ ಒಟ್ಟಾರೆಯಾಗಿ ರೂ. 2,345 ಕೋಟಿ ಹಣಪಾವತಿಸಲಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ಹಳ್ಳಿಯಲ್ಲೂ ಸಾರ್ವಜನಿಕರ, ಅಧಿಕಾರಿಗಳ ಸಮ್ಮುಖದಲ್ಲಿ ಬಸ್ ವ್ಯವಸ್ಥೆ, ರಸ್ತೆ ದುರಸ್ತಿ, ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಸಾರಾಯಿ ಅಂಗಡಿಗಳ ಬಂದ್ ಮಾಡುವ ಮನವಿಯನ್ನು ಆಲಿಸಿದ ಸಚಿವರು ಸಮಸ್ಯೆಗಳಿಗೆ ತಕ್ಷಣವೇ ಪರಿಹಾರಗಳನ್ನು ಒದಗಿಸಿದರು. ಕೆಲವು ಸಮಸ್ಯೆಗಳನ್ನು ಅಧಿಕಾರಿಗಳಿಗೆ ವೀಕ್ಷಿಸಿ, ಪರಿಶೀಲಿಸಿ ಬಗೆಹರಿಸುವಂತೆ ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆಗಳಿಗೆ ಸರ್ಕಾರದ ಜೊತೆಗೆ ಸಾರ್ವಜನಿಕರ ಸಹಕಾರವು ಇರಬೇಕು. 396 ಹಳ್ಳಿಗಳಿಗೆ ಮಲಪ್ರಭಾ ನೀರು ತರುವ ಯೋಜನೆಯ ಪ್ರಾರಂಭಗೊಂಡಿದೆ. ಕೆಲವೊಂದು ಹಳ್ಳಿಗಳಲ್ಲಿ ಅರಣ್ಯ ಇಲಾಖೆಯ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಬಗೆಹರಿಸುವುದಾಗಿ ಅವರು ತಿಳಿಸಿದರು.
ಮೇವು ಬೀಜ ಹಾಗೂ ಸುಕನ್ಯಾ ಸಮೃದ್ಧಿ ಪಾಸ್ ಬುಕ್ ವಿತರಣೆ: ಮನಸೂರು ಗ್ರಾಮದಲ್ಲಿ ಬರಗಾಲದ ನಿಮಿತ್ತ ರೈತರಿಗೆ ಮೇವು ಬೀಜ ವಿತರಣೆ ಹಾಗೂ ಮನಸೂರು, ಮನಗುಂಡಿ ಗ್ರಾಮದಲ್ಲಿ 10 ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ಗಳನ್ನು ಸಚಿವರು ವಿತರಿಸಿದರು.
ಮನಸೂರು ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ:
ಲೋಕೋಪಯೋಗಿ ಇಲಾಖೆಯ ವತಿಯಿಂದ ಧಾರವಾಡ ತಾಲೂಕಿನ ಎಸ್.ಎಚ್-28 ರಿಂದ ರಾಜ್ಯ ಹೆದ್ದಾರಿ-01 ಕ್ಕೆ ಕೂಡು ರಸ್ತೆ ವಾಯಾ ಮನಸೂರು–ಮನಗುಂಡಿ–ಬೆಳ್ಳಿಗಟ್ಟಿ ರಸ್ತೆ ಅಭಿವೃದ್ಧಿ ಹಾಗೂ ಮನಸೂರು ಗ್ರಾಮದ ವ್ಯಾಪ್ತಿಯಲ್ಲಿ ಪುಟ್ ಪಾತ್ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಕಾಮಗಾರಿಗೆ ಅಂದಾಜು 150 ಲಕ್ಷ ರೂ. (1.50 ಕೋಟಿ ರೂ.) ಅನುದಾನ ನಿಗದಿಪಡಿಸಲಾಗಿದ್ದು, ರಸ್ತೆ ಅಭಿವೃದ್ಧಿ ಹಾಗೂ ಪುಟ್ ಪಾತ್ ನಿರ್ಮಾಣದಿಂದ ಗ್ರಾಮಸ್ಥರು ಮತ್ತು ವಾಹನ ಸವಾರರಿಗೆ ಅನುಕೂಲವಾಗಲಿದೆ.
ಮುಮ್ಮಿಗಟ್ಟಿಯಲ್ಲಿ ಸ್ಮಶಾನದ ಜಾಗ ಮತ್ತು ಅಭಿವೃದ್ಧಿ: ಊರಿನಲ್ಲಿ ಸ್ಮಶಾನಕ್ಕೆ ಸಂಬಂಧಿಸಿದಂತೆ 20 ಗುಂಟೆ ಜಾಗದ ವ್ಯತ್ಯಾಸವಿದ್ದು, ಅದನ್ನು ಸರಿಪಡಿಸಿ ಕೊಡುವುದಾಗಿ ಹೇಳಿ, ಇದಕ್ಕೆ ತಗಲುವ ಹಣವನ್ನು ತಾವೇ ಭರಿಸುವುದಾಗಿ ಸಚಿವರು ತಿಳಿಸಿದರು.
ವಿದ್ಯಾರ್ಥಿಗಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ, ಹಾಸ್ಟೆಲ್ ವ್ಯವಸ್ಥೆ, ಲ್ಯಾಪ್‍ಟಾಪ್ ಗಳನ್ನು ವಿತರಿಸಲಾಗುವುದು. ಅಂಗವಿಕಲ ವ್ಯಕ್ತಿಗಳಿಗೆ ಸ್ವ ಉದ್ಯೋಗ ಪ್ರಾರಂಭಿಸಲು ಅಂಗಡಿಗಳನ್ನು ಹಾಕಲು ಸಹಾಯಹಸ್ತ ನೀಡಿದರು.
ಚೆಕ್ ಮತ್ತು ಹಕ್ಕು ಪತ್ರ ವಿತರಣೆ: ಮುಮ್ಮಿಗಟ್ಟಿ ಗ್ರಾಮದಲ್ಲಿ 12 ಎಮ್ಮೆ ಮತ್ತು ಹಸುಗಳ ಪ್ರಾಣ ಹಾನಿ ಆಗಿರುವುದರಿಂದ ರೈತರಿಗೆ 1.80 ಲಕ್ಷ ರೂ.ಗಳ ಚೆಕ್ ವಿತರಿಸಿದರು. ಕಾರ್ಮಿಕರ ಇಲಾಖೆ ವತಿಯಿಂದ ಕಾರ್ಮಿಕರ ಮಕ್ಕಳ ವಿವಾಹಕ್ಕಾಗಿ ಪೋಷಕರಿಗೆ ರೂ. 60,000 ಸಹಾಯಧನದ ಎರಡು ಚೆಕ್ ವಿತರಿಸಿದರು. ಹಾಗೂ ವಿಕಾಸನಗರ, ಉಪಗ್ರಾಮದ ಭೂ ಗ್ಯಾರಂಟಿಯ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ಸಚಿವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಧಾರವಾಡ ತಹಶೀಲ್ದಾರ್ ಡಾ. ಡಿ.ಎಚ್.ಹೂಗಾರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಮನಸೂರು ಗ್ರಾಮ ಪಂಚಾಯಿತಿಯ ಪಿಡಿಒ ಬಿ.ಡಿ. ಹಿರೇಮಠ ಸೇರಿದಂತೆ ಮಲ್ಲನ ಗೌಡ್ರು ಹಾಗೂ ಗ್ರಾಮದ ಮುಖ್ಯಸ್ಥರು ಉಪಸ್ಥಿತರಿದ್ದರು.

