ಬೆಂಗಳೂರು: ಟ್ಯೂಷನ್ ಕ್ಲಾಸ್ ಗೆ ಹೋಗದ್ದಕ್ಕೆ ಮಕ್ಕಳಿಗೆ ಪೋಷಕರು ಬೈದಿದ್ದೇ ತಪ್ಪಾಗಿದೆ. ತಂದೆ-ತಾಯಿ ಬೈದಿದ್ದಕ್ಕೆ ಬೇಸರಗೊಂದು ಮನೆ ಬಿಟ್ಟು ಹೋದ ಅಕ್ಕ-ತಮ್ಮ ಚಿತ್ರದುರ್ಗದಲ್ಲಿ ಪತ್ತೆಯಾಗಿದ್ದಾರೆ.
ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳಿಬ್ಬರೂ ಚಿತ್ರದುರ್ಗದಲ್ಲಿ ಪತ್ತೆಯಾಗಿದ್ದಾರೆ. 13 ವರ್ಷದ ಬಾಲಕಿ ಹಾಗೂ ಆಕೆಯ ತಮ್ಮ 9 ವರ್ಷದ ಬಾಲಕ ಇಬ್ಬರನ್ನೂ ಪೋಷಕರು ಟ್ಯೂಷನ್ ಕ್ಲಾಸ್ ಗೆ ಹಾಕಿದ್ದರು. ಆದರೆ ಮಕ್ಕಳಿಬ್ಬರೂ ತಾವು ಟ್ಯೂಷನ್ ಕ್ಲಾಸ್ ಗೆ ಹೋಗಲ್ಲ ಎಂದು ಹಠ ಹಿಡಿದು ಕುಳಿತಿದ್ದಾರೆ. ಇದರಿಂದ ಕೋಪಗೊಂಡ ತಂದೆ-ತಾಯಿ ಇಬ್ಬರಿಗೂ ಬೈದಿದ್ದಾರೆ.
ಅಪ್ಪ ಅಮ್ಮ ಬೈದಿದಕ್ಕೆ ನೊಂದ ಮಕ್ಕಳಿಬ್ಬರೂ ಫೆ.೧ರಂದು ಮನೆ ಬಿಟ್ಟು ಹೋಗಿದ್ದಾರೆ. ಬೆಂಗಳೂರಿನ ಮಾರತ್ತಹಳ್ಳಿಯ ಅಶ್ವತ್ಥನಗರದ ಮನೆಯಿಂದ ಮಕ್ಕಳಿಬ್ಬರೂ ನಾಪತ್ತೆಯಾಗಿದ್ದಾರೆ. ಮಕ್ಕಳಿಬ್ಬರೂ ಮನೆಯಿಂದ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಹೀಗೆ ಮನೆ ಬಿಟ್ಟು ಹೋಗುವಾಗ ಬಾಲಕಿ ತನ್ನ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿದ್ದಾಳೆ. ಹಾಗಾಗಿ ಆಕೆಗೆ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಲು ಸಾಧ್ಯವಾಗಿದೆ. ಅಕ್ಕ-ತಮ್ಮ ಇಬ್ಬರೂ ಬೆಂಗಳೂರಿನಿಂದ ಶಿವಮೊಗ್ಗ, ಶಿವಮೊಗ್ಗದಿಂದ ಚಿತ್ರದುರ್ಗ ಹೀಗೆ ಊರೂರು ಸುತ್ತಾಡಿದ್ದಾರೆ. ಮಕ್ಕಳು ಕಾಣೆಯಾಗುತ್ತಿದ್ದಂತೆ ಪೋಷಕರು ಹೆಚ್.ಎ.ಎಲ್ ಠಾಣೆಯಲ್ಲಿ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದಾರೆ. ಅಲ್ಲದೇ ಇಬ್ಬರು ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು.
ಫೋಟೋಗಳನ್ನು ನೋಡಿದ ಸಾರ್ವಜನಿಕರು ಚಿತ್ರದುರ್ಗದಲ್ಲಿ ಇಬ್ಬರು ಮಕ್ಕಳು ಇರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಹೆಚ್.ಎ.ಎಲ್ ಪೊಲೀಸರು ಚಿತ್ರದುರ್ಗಕ್ಕೆ ತೆರಳಿ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ಸದ್ಯ ಮಕ್ಕಳಿಬ್ಬರೂ ಪೋಷಕರ ಮಡಿಲು ಸೇರಿದ್ದಾರೆ.

