HomeLive Newsಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ : ರೈತರಿಗೆ ಇಲ್ಲಿದೆ ಮಾಹಿತಿ

ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ : ರೈತರಿಗೆ ಇಲ್ಲಿದೆ ಮಾಹಿತಿ

ಧಾರವಾಡ  :  ಕೇಂದ್ರ ಸರ್ಕಾರದ ಬೆಂಬಲ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳು ಉತ್ಪನ್ನ ಮಾರಾಟಕ್ಕಾಗಿ ಧಾರವಾಡ ಜಿಲ್ಲೆಯ 9,577 ರೈತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 1,630 ರೈತರು, 13,340.50 ಕ್ವಿಂಟಲ್ ಹೆಸರು ಕಾಳು ಉತ್ಪನ್ನವನ್ನು ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿದ್ದಾರೆ. ಈಗಾಗಲೇ 1,512 ರೈತರಿಗೆ ರೂ. 9,51,85,408 ಗಳ ಮೊತ್ತವನ್ನು ಡಿಬಿಟಿ ಮೂಲಕ ನೇರವಾಗಿ ಅವರ ಖಾತೆಗಳಿಗೆ ಪಾವತಿಸಲಾಗಿದೆ. ಮತ್ತು ಬಾಕಿ ಇರುವ 210 ರೈತರಿಗೆ ಹಣ ಪಾವತಿ ಕಾರ್ಯ ಪ್ರಗತಿಯಲ್ಲಿದ್ದು, ಬರುವ ಶನಿವಾರ (ಫೆ.07) ದೊಳಗೆ ಹಣ ಪಾವತಿ ಆಗಲಿದೆ ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಧಾರವಾಡ ಉಪನಿರ್ದೇಶಕ ವಿ.ಎಮ್. ಲಮಾಣಿ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಸಪ್ಟೆಂಬರ್ 2025 ರಿಂದ ಜನವರಿ 22, 2026 ರವರೆಗೆ ಧಾರವಾಡ ಜಿಲ್ಲೆಯ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳು ಉತ್ಪನ್ನವನ್ನು ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ ರೂ. 8,768 ಗಳ ದರದಲ್ಲಿ ಖರೀದಿಗಾಗಿ ರೈತರ ನೋಂದಣಿ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಅದರಂತೆ ಜಿಲ್ಲೆಯ 9,577 ರೈತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಮತ್ತು 1,630 ರೈತರು ಖರೀದಿ ಕೇಂದ್ರಗಳಿಗೆ ತಮ್ಮ ಹೆಸರು ಕಾಳು ಮಾರಾಟ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ 14 ಜಿಲ್ಲೆಗಳಿಂದ 38 ಸಾವಿರ ಮೆಟ್ರಿಕ್ ಟನ್ ಹೆಸರು ಕಾಳು ಉತ್ಪನ್ನವನ್ನು ರೈತರಿಂದ ಖರೀದಿಸಲು ಅನುಮತಿ ನೀಡಿತ್ತು. ಮತ್ತು 2025-26 ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯ 97,406 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಕಾಳು ಬಿತ್ತನೆಯಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಲ್ಲೆಯ ರೈತರಿಂದ ಹೆಸರು ಕಾಳು ಉತ್ಪನ್ನ ಖರೀದಿಗಾಗಿ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳವನ್ನು ಖರೀದಿ ಸಂಸ್ಥೆಯಾಗಿ ನೇಮಿಸಿತ್ತು. ಅದರಂತೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 23 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

2025-26 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಚ್ಚು ಮಳೆಯಾಗಿದ್ದು, ಹೆಸರು ಕಾಳು ಗುಣಮಟ್ಟ ಹಾಳಾಗಿದೆ. ಬಿತ್ತನೆಯಾಗಿರುವ ಹೆಸರು ಕಾಳು ಬೆಳೆ ಹಾನಿಯಿಂದ ಸಂಪೂರ್ಣ ಕಪ್ಪಾಗಿದ್ದು, ಜಿಲ್ಲೆಯಾದಂತ್ಯ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳು ಖರೀದಿ ಮಾಡುವ ಗುರಿ ತಲುಪಲು ಕಷ್ಟ ಸಾಧ್ಯವಾಗುತ್ತಿದೆ. ಸದರಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳು ಬದಲಾಗಿ ರೈತರಿಗೆ ಅನುಕೂಲವಾಗುವ ಹೆಸರು ಕಾಳುಗಳ ಗುಣಮಟ್ಟದ ವರ್ಗೀಕರಣದ ಪ್ರತ್ಯೇಕ ಗ್ರೇಡ್‍ಗಳನ್ನು ಮಾಡಿ ಎಫ್.ಎ.ಕ್ಯೂ ಗುಣಮಟ್ಟದಲ್ಲಿ ಸಡಲಿಕೆ ಮಾಡಿ ದರ ನಿಗದಿಪಡಿಸಿ ಖರೀದಿ ಮಾಡಿದ್ದಲ್ಲಿ ರೈತರಿಗೆ ಅನುಕೂಲವಾಗುತ್ತದೆ ಎಂದು ಧಾರವಾಡ ಜಿಲ್ಲಾಧಿಕಾರಿಗಳು ಸಪ್ಟೆಂಬರ್ 18, 2025 ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬ್ಯಾಹಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ಪಿ.ಕೆ.ಪಿ.ಎಸ್) ದಲ್ಲಿ ತೆರೆಯಲಾಗಿದ್ದ ಹೆಸರು ಕಾಳು ಉತ್ಪನ್ನ ಖರೀದಿ ಕೇಂದ್ರದಲ್ಲಿ ಹೆಸರು ಕಾಳು ಮಾರಾಟಮಾಡಿದ್ದ ರೈತರ ಪೈಕಿ ಸುಮಾರು 72 ಜನ ರೈತರ ಹೆಸರು ಕಾಳು ಉತ್ಪನ್ನವು ಎಫ್.ಎ.ಕ್ಯೂ ಗುಣಮಟ್ಟ ಹೊಂದಿರದ ಕಾರಣ ಖರೀದಿ ಸಂಸ್ಥೆಯವರು ಈ ರೈತರ ಹೆಸರು ಕಾಳು ಉತ್ಪನ್ನವನ್ನು ಹಿಂದಿರುಗಿಸಲು ಕ್ರಮಕೈಗೊಂಡಿದ್ದಾರೆ.ಹಿಂದಿರುಗಿಸಲು ಕ್ರಮವಹಿಸಿರುವ ಉತ್ಪನ್ನವು, ಅತಿಯಾದ ಮಳೆಯಿಂದಾಗಿ ಹೆಸರು ಕಾಳು ಸಂಪೂರ್ಣ ಕಪ್ಪಾಗಿದ್ದು, ಹೆಸರು ಕಾಳು ಉತ್ಪನ್ನವು ಎಫ್.ಎ.ಕ್ಯೂ ಗುಣಮಟ್ಟ ಹೊಂದಿರುವುದಿಲ್ಲ ಎಂದು ಖರೀದಿ ಸಂಸ್ಥೆಯವರು ತಿಳಿಸಿದ್ದಾರೆ.

ಎಫ್.ಎ.ಕ್ಯೂ ಗುಣಮಟ್ಟದ ಸಡಲಿಕೆಗಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದ ಮುಂದಿನ ನಿರ್ದೇಶನದ ಮೇರೆಗೆ ಕ್ರಮವಹಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಉಪನಿರ್ದೇಶಕ ವಿ.ಎಮ್.ಲಮಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular