ಚಿಕ್ಕಬಳ್ಳಾಪುರ: ಜಗಳವಾಡಿ ಮಲಗಿದ್ದ ಪತಿಯ ಮರ್ಮಾಂಗಕ್ಕೆ ಒದ್ದು ಪತ್ನಿ ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ವೆಂಕಟರಾಯನ ಕೋಟೆಯಲ್ಲಿ ನಡೆದಿದೆ.
ಒಂದು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ದಂಪತಿ ವಿನಾಕಾರಣ ಜಗಳವಾಡುತ್ತಿದ್ದರು. ಮಹಿಳೆ ವಿಚಿತ್ರವಾಗಿ ವರ್ತಿಸಿ ವಿನಾಕಾರಣ ಪತಿ ಜೊತೆ ಜಗಳವಾಡುತ್ತಿದ್ದಳು ಎನ್ನಲಾಗಿದೆ. ಇದೇ ರೀತಿ ಪತಿಯ ಬಟ್ಟೆ ಹರಿದು ಹಾಕಿ ಗಲಾಟೆ ಮಾಡಿದ್ದಾಳೆ. ಮಧ್ಯರಾತ್ರಿ ಮನೆಯಲ್ಲಿ ಮಲಗಿದ್ದ ಗಂಡನ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ. ನಂತರ ಆತನೇ ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬೆಳಗ್ಗೆ ಪತಿಯನ್ನು ನೋಡಲು ಆಸ್ಪತ್ರೆಗೆ ಬಂದ ಮಹಿಳೆಗೆ ಕುಟುಂಬದವರು ಗಂಡನ ಭೇಟಿಗೆ ಅವಕಾಶ ನೀಡಿಲ್ಲ. ನಂತರ ಚಿಂತಾಮಣಿ ಪೊಲೀಸರಿಗೆ ದೂರು ನೀಡಿದ್ದು, ಮಹಿಳೆ ಕ್ರಿಮಿನಾಶಕ ಸೇವಿಸಿದ್ದಾಳೆ. ಅಸ್ವಸ್ಥಳಾಗಿದ್ದ ಮಹಿಳೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎನ್ನಲಾಗಿದೆ.

