ಉತ್ತರ ಭಾರತದ ಪ್ರಸಿದ್ಧ ಹಾಗೂ ಜನಪ್ರಿಯ ಆಹಾರ ಪದಾರ್ಥಗಳಲ್ಲಿ ಅಮೃತಸರಿ ಕುಲ್ಚಾ ಕೂಡ ಒಂದು. ಗರಿಗರಿಯಾದ ಮತ್ತು ಮೃದುವಾದ ಈ ಸ್ಟಫ್ಡ್ ಕುಲ್ಚಾವನ್ನು ಬಿಸಿಬಿಸಿಯಾದ ಚೋಲೆ ಮಸಾಲ ಜೊತೆ ಸವಿಯಲು ಸಖತ್ ಮಜಾ ನೀಡುತ್ತದೆ. ಸಾಮಾನ್ಯವಾಗಿ ರೆಸ್ಟೋರೆಂಟ್‌ಗಳಲ್ಲಿ ಮೈದಾ ಮತ್ತು ಬೆಣ್ಣೆ ಬಳಸಿ ಮಾಡುವ ಈ ಪಂಜಾಬಿ ಸ್ಪೆಷಲ್ ತಿಂಡಿಯನ್ನು, ಕ್ಯಾಟೋಲಾ ಎಣ್ಣೆ (Canola Oil) ಬಳಸುವ ಮೂಲಕ ಆರೋಗ್ಯಕರವಾಗಿ ಮನೆಯಲ್ಲೇ ಹೇಗೆ ಸಿದ್ಧಪಡಿಸಬಹುದು ಎಂಬ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ಹಿಟ್ಟು ತಯಾರಿಸಲು:
- ಮೈದಾ ಹಿಟ್ಟು – 1 ಕೆಜಿ
- ಕ್ಯಾಟೋಲಾ ಎಣ್ಣೆ – 100 ಎಂಎಲ್
- ನೀರು – 400 ಎಂಎಲ್ (ಅಗತ್ಯಕ್ಕೆ ತಕ್ಕಷ್ಟು)
- ಉಪ್ಪು – ಒಂದು ಚಿಟಿಕೆ
ಹೂರಣಕ್ಕೆ (Filling):
- ಬೇಯಿಸಿ ಪುಡಿ ಮಾಡಿದ ಆಲೂಗಡ್ಡೆ – ಅರ್ಧ ಕೆಜಿ
- ಸಣ್ಣಗೆ ಹೆಚ್ಚಿದ ಈರುಳ್ಳಿ – 1 ಕಪ್
- ಹುರಿದು ಪುಡಿ ಮಾಡಿದ ಧನಿಯಾ ಅಥವಾ ಕೊತ್ತಂಬರಿ ಬೀಜ – 2 ಚಮಚ
- ಸಣ್ಣಗೆ ಹೆಚ್ಚಿದ ಶುಂಠಿ – 2 ಚಮಚ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಹಸಿಮೆಣಸಿನಕಾಯಿ – 1
- ದಾಳಿಂಬೆ ಬೀಜದ ಪುಡಿ (ಅನಾರ್ ದಾನ) – 1 ದೊಡ್ಡ ಚಮಚ
- ಲಿಂಬೆ ರಸ – ಸ್ವಲ್ಪ
ತಯಾರಿಸುವ ವಿಧಾನ ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ ಹಿಟ್ಟು, ನೀರು, ಕ್ಯಾಟೋಲಾ ಎಣ್ಣೆ ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಮೃದುವಾದ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಈ ಹಿಟ್ಟನ್ನು ಒದ್ದೆಯಾದ ಬಟ್ಟೆಯಿಂದ ಮುಚ್ಚಿ ಒಂದು ಗಂಟೆಗಳ ಕಾಲ ತಂಪಾದ ಜಾಗದಲ್ಲಿ ನೆನೆಯಲು ಬಿಡಿ.
ಇತ್ತ ಮತ್ತೊಂದು ಪಾತ್ರೆಯಲ್ಲಿ ಒಗ್ಗರಣೆಗೆ ಬೇಕಾದ ಎಣ್ಣೆಯನ್ನು ಹೊರತುಪಡಿಸಿ, ಹೂರಣಕ್ಕೆ ನೀಡಲಾದ ಎಲ್ಲಾ ಸಾಮಗ್ರಿಗಳನ್ನು (ಆಲೂಗಡ್ಡೆ, ಈರುಳ್ಳಿ, ಮಸಾಲೆಗಳು ಹಾಗೂ ಲಿಂಬೆ ರಸ) ಒಟ್ಟಿಗೆ ಸೇರಿಸಿ ಹದವಾಗಿ ಮಿಶ್ರಣ ಮಾಡಿ ಹೂರಣ ಸಿದ್ಧಪಡಿಸಿಟ್ಟುಕೊಳ್ಳಿ.
ಈಗ ಕಲಸಿಟ್ಟ ಹಿಟ್ಟಿನಿಂದ ಸಣ್ಣ ಆಲೂಗಡ್ಡೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಈ ಉಂಡೆಗಳನ್ನು ಸ್ವಲ್ಪ ಲಟ್ಟಿಸಿ ಅದರ ಮಧ್ಯದಲ್ಲಿ ಸಿದ್ಧಪಡಿಸಿದ ಆಲೂಗಡ್ಡೆ ಹೂರಣವನ್ನು ಇಟ್ಟು ಎಲ್ಲಾ ಕಡೆಯಿಂದಲೂ ಚೆನ್ನಾಗಿ ಮುಚ್ಚಿ. ನಂತರ ಲಟ್ಟಣಿಗೆಯಿಂದ ಮೃದುವಾಗಿ ಒತ್ತಿ ಕುಲ್ಚಾ ಆಕಾರಕ್ಕೆ ತನ್ನಿ.
ಒಲೆಯ ಮೇಲೆ ನಾನ್-ಸ್ಟಿಕ್ ಪ್ಯಾನ್ ಬಿಸಿ ಮಾಡಿ, ಸಿದ್ಧಪಡಿಸಿದ ಕುಲ್ಚಾವನ್ನು ಹಾಕಿ ಸುತ್ತಲೂ ಸ್ವಲ್ಪ ಕ್ಯಾಟೋಲಾ ಎಣ್ಣೆಯನ್ನು ಸವರಿ ಎರಡು ಬದಿ ಹೊಂಬಣ್ಣ ಬರುವವರೆಗೆ ಸಮನಾಗಿ ಬೇಯಿಸಿ. ಬಿಸಿಬಿಸಿಯಾದ ಅಮೃತಸರಿ ಕುಲ್ಚಾವನ್ನು ಪುದೀನಾ ಚಟ್ನಿ, ಮೊಸರು ಅಥವಾ ಚೋಲೆ ಮಸಾಲದೊಂದಿಗೆ ಸವಿಯಲು ನೀಡಿ.

