HomeSports'ನಮ್ಮ ಕುಟುಂಬದ ಬ್ರೀಡ್ ಬದಲಾಗಬೇಕಿತ್ತು': ಯುವರಾಜ್ ಸಿಂಗ್ ಮದುವೆ ಬಗ್ಗೆ ತಂದೆ ಯೋಗರಾಜ್ ಸಿಂಗ್ ವಿವಾದಾತ್ಮಕ...

‘ನಮ್ಮ ಕುಟುಂಬದ ಬ್ರೀಡ್ ಬದಲಾಗಬೇಕಿತ್ತು’: ಯುವರಾಜ್ ಸಿಂಗ್ ಮದುವೆ ಬಗ್ಗೆ ತಂದೆ ಯೋಗರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ!

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ, ಮಾಜಿ ಕ್ರಿಕೆಟಿಗ ಹಾಗೂ ನಟ ಯೋಗರಾಜ್ ಸಿಂಗ್ ತಮ್ಮ ವಿಲಕ್ಷಣ ಮತ್ತು ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಮಗ ಯುವರಾಜ್ ಸಿಂಗ್, ಸೊಸೆ ಹ್ಯಾಜೆಲ್ ಕೀಚ್ ಮತ್ತು ಕೌಟುಂಬಿಕ ಸಂಬಂಧಗಳ ಬಗ್ಗೆ ನೀಡಿರುವ ಹಳೆಯ ಸಂದರ್ಶನದ ಕೆಲವು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.

‘ಬ್ರೀಡ್ ಬದಲಾಯಿಸಲು’ ಬಯಸಿದ್ದ ಯೋಗರಾಜ್! ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಯುವರಾಜ್ ಸಿಂಗ್ ಮದುವೆಯ ಕುರಿತು ಮಾತನಾಡಿದ್ದ ಯೋಗರಾಜ್ ಸಿಂಗ್, ತಮಗೆ ಭಾರತದ ಹೊರಗಿನ ಹುಡುಗಿ ತಮ್ಮ ಮನೆಗೆ ಸೊಸೆಯಾಗಿ ಬರಬೇಕೆಂಬ ಹಂಬಲ ಇತ್ತು ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. “ಯುವರಾಜ್‌ಗೆ 20ರ ಹರೆಯದಲ್ಲೇ ಮದುವೆ ಮಾಡಲು ಜನರು ಒತ್ತಾಯಿಸುತ್ತಿದ್ದರು. ಆದರೆ ಆತನಿಗೆ 38 ವರ್ಷ ಆದಾಗ, ನಿನ್ನ ಸಂಗಾತಿಯನ್ನು ನೀನೇ ಹುಡುಕೋ ಎಂದು ಹೇಳಿದೆ. ಆದರೆ ನಮ್ಮ ಕುಟುಂಬದ ‘ಬ್ರೀಡ್’ (ತಳಿ) ಬದಲಾಗಲಿ ಎಂಬ ಕಾರಣಕ್ಕೆ ಐರಿಶ್ ಅಥವಾ ಇಂಗ್ಲಿಷ್ ಹುಡುಗಿಯನ್ನು ಮದುವೆಯಾಗುವಂತೆ ನಾನು ಆತನಿಗೆ ಕೇಳಿಕೊಂಡಿದ್ದೆ” ಎಂದು ಹೇಳಿದ್ದಾರೆ. ತದನಂತರ ಹ್ಯಾಜೆಲ್ ಕೀಚ್ ತಮ್ಮ ಜೀವನಕ್ಕೆ ಬಂದಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಹ್ಯಾಜೆಲ್ ತಮಗೆ ಸೊಸೆಯಲ್ಲ, ಮಗಳು ಎಂದು ಕರೆದಿದ್ದಾರೆ. ಯುವರಾಜ್ ಮತ್ತು ಹ್ಯಾಜೆಲ್ ದಂಪತಿಗೆ ಓರಿಯನ್ ಮತ್ತು ಔರಾ ಎಂಬ ಇಬ್ಬರು ಮಕ್ಕಳಿದ್ದಾರೆ.

ಮಕ್ಕಳಿಂದ ದೂರವಿರಲು ಕಠಿಣ ಶಿಸ್ತೇ ಕಾರಣ? ಮತ್ತೊಂದು ಸಂದರ್ಶನದಲ್ಲಿ ತಮ್ಮ ಕಠಿಣ ಪಾಲನೆ (Strict Parenting) ಮತ್ತು ಸ್ವಭಾವದ ಬಗ್ಗೆ ಮಾತನಾಡಿರುವ ಯೋಗರಾಜ್ ಸಿಂಗ್, “ಯುವರಾಜ್ ತನ್ನ ಮಕ್ಕಳನ್ನು ನನ್ನ ಕೈಗೆ ಒಪ್ಪಿಸಿದರೆ, ಆ ಮಕ್ಕಳಿಗೂ ಯುವಿಗೆ ಸಿಕ್ಕ ಇತಿಹಾಸವೇ ಮರುಕಳಿಸುತ್ತದೆ. ಚಿನ್ನವನ್ನು ಬೆಂಕಿಯಲ್ಲಿ ಸುಟ್ಟರೆ ಮಾತ್ರ ಅದಕ್ಕೊಂದು ಆಕಾರ ಸಿಗುತ್ತದೆ. ನನ್ನ ತರಬೇತಿಯಲ್ಲಿ ಯಾವುದೇ ದಯೆ ಇರುವುದಿಲ್ಲ. ಇದೇ ಭಯದಿಂದಲೇ ಅವರು ನನ್ನಿಂದ ದೂರವಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಮಗೆ ಇಬ್ಬರು ಪತ್ನಿಯರು, ನಾಲ್ಕು ಜನ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಒಟ್ಟಿಗೆ ಹತ್ತು ಕಾರುಗಳಲ್ಲಿ ಸುತ್ತಾಡುವ ಕನಸಿದೆ, ಆದರೆ ಕುಟುಂಬದವರು ತಮ್ಮಿಂದ ದೂರವೇ ಉಳಿದಿದ್ದಾರೆ ಎಂದು ಅವರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂದೆಯಲ್ಲ, ಕೇವಲ ಕೋಚ್ ಆಗಿದ್ದರು: ಯುವರಾಜ್ ಸಿಂಗ್ ತಮ್ಮ ತಂದೆಯ ಕಠಿಣ ಸ್ವಭಾವದ ಬಗ್ಗೆ ಈ ಹಿಂದೆ ಯುವರಾಜ್ ಸಿಂಗ್ ಕೂಡ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದರು. “ನನ್ನ ತಂದೆ ನನಗೆ ಎಂದಿಗೂ ತಂದೆಯಾಗಿರಲಿಲ್ಲ, ಕೇವಲ ಒಬ್ಬ ಕೋಚ್ ಆಗಿದ್ದರು. ನನ್ನ ಮಗ ಓರಿಯನ್ ವಿಷಯದಲ್ಲಿ ಇದು ಮರುಕಳಿಸುವುದು ನನಗೆ ಇಷ್ಟವಿಲ್ಲ. ನನ್ನ ತಂದೆ ಆತನನ್ನೂ ಕ್ರಿಕೆಟ್‌ಗೆ ಸೇರಿಸುವಂತೆ ಒತ್ತಾಯಿಸುತ್ತಿರುತ್ತಾರೆ, ಆದರೆ ನಾನು ಮಗನಿಗೆ ಆತನದೇ ಆದ ಜೀವನ ನಡೆಸಲು ಬಿಡಿ ಎಂದು ಹೇಳುತ್ತೇನೆ. ನಾನು ನನ್ನ ಮಗನಿಗೆ ಒಬ್ಬ ಒಳ್ಳೆಯ ತಂದೆಯಾಗಲು ಬಯಸುತ್ತೇನೆ” ಎಂದು ಯುವರಾಜ್ ಸಿಂಗ್ ತಮ್ಮ ಬಾಲ್ಯದ ಕಹಿ ದಿನಗಳನ್ನು ನೆನಪಿಸಿಕೊಂಡಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular