ಮಗ ಕಪ್ಪಗಿದ್ದಾನೆ, ಇವನು ನನಗೆ ಹುಟ್ಟಿದವನಲ್ಲ ಎಂಬ ಅಕಾರಣ ಅನುಮಾನದಿಂದ ಪಾಪಿ ತಂದೆಯೊಬ್ಬ ತನ್ನ 11 ವರ್ಷದ ಮಗನನ್ನೇ ಹತ್ಯೆ ಮಾಡಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಏಲೂರಿನಲ್ಲಿ ನಡೆದಿದೆ.
ಕಳೆದ ಕೆಲವು ವರ್ಷಗಳಿಂದ ಮಗ ಮತ್ತು ಪತ್ನಿಯ ಮೇಲೆ ಸಂಶಯ ಪಟ್ಟು ಕಿರುಕುಳ ನೀಡುತ್ತಿದ್ದ ವಿನೋದ್ ಎಂಬಾತ, ಈಗ ತನ್ನ ಮಗನನ್ನೇ ಹೊಡೆದು ಸಾಯಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮಗನ ಮೈಬಣ್ಣದ ಕುರಿತಾದ ವಿಕೃತ ಅನುಮಾನವೇ ಈ ಭೀಕರ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಆಂಧ್ರಪ್ರದೇಶದ ಏಲೂರಿನ ನಾಯುಡುಗುಡೆಂ ನಿವಾಸಿ ವಿನೋದ್ ಎಂಬಾತನಿಗೆ 11 ವರ್ಷದ ಮಗ ರಿಷಿಬಾಬು ಇದ್ದನು. ಆದರೆ, ತನ್ನ ಮಗ ಕಪ್ಪಗಿದ್ದಾನೆ, ಇವನು ನನಗೆ ಹುಟ್ಟಿದವನಲ್ಲ ಎಂಬ ಅಕಾರಣ ಅನುಮಾನದಿಂದ ವಿನೋದ್ ಕಳೆದ ಕೆಲವು ವರ್ಷಗಳಿಂದ ಪತ್ನಿ ಮತ್ತು ಮಗನಿಗೆ ಅತೀವ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಸಂಬಂಧ ಈ ಹಿಂದೆ ಹಲವು ಬಾರಿ ಹಿರಿಯರು ಸಂಧಾನ ನಡೆಸಿ ಬುದ್ಧಿ ಹೇಳಿದ್ದರೂ ವಿನೋದ್ ತನ್ನ ನಡವಳಿಕೆಯನ್ನು ಬದಲಿಸಿಕೊಂಡಿರಲಿಲ್ಲ.
ಅನುಮಾನಾಸ್ಪದ ಸಾವು: ಶನಿವಾರ ಬೆಳಿಗ್ಗೆ ಬಾಲಕ ರಿಷಿಬಾಬು ಮನೆಯ ಹೊರಗಿನ ಮಂಚದ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ. ಬಾಲಕನ ದೇಹದ ಮೇಲೆ ಹಲವು ಕಡೆ ಗಾಯಗಳಾಗಿದ್ದು, ತಂದೆ ವಿನೋದ್ ಈತನನ್ನು ಹೊಡೆದು ಕೊಂದಿದ್ದಾನೆ ಎಂದು ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. ಬಾಲಕನ ತಾತ (ತಾಯಿಯ ತಂದೆ) ನೀಡಿದ ದೂರಿನ ಮೇರೆಗೆ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಮಗನ ಮೇಲಿನ ದ್ವೇಷದಿಂದಲೇ ವಿನೋದ್ ಈ ಘಾತುಕ ಕೃತ್ಯ ಎಸಗಿದ್ದಾನೆ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ಪೊಲೀಸ್ ತನಿಖೆ: ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿ ವಿನೋದ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. “ಮಗನ ಮೈಬಣ್ಣದ ಬಗ್ಗೆ ಇದ್ದ ಅನುಮಾನವೇ ಈ ಘಟನೆಗೆ ಮೂಲ ಕಾರಣ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

